ಬಂಟ್ವಾಳ, ಎಪ್ರಿಲ್ 23, 2025 (ಕರಾವಳಿ ಟೈಮ್ಸ್) : ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಪಿ ಪಾಕಿಸ್ಥಾನದ ಭಯೋತ್ಪಾದಕರು ನಡೆಸಿದ ಪೈಶಾಚಿಕ ಕೃತ್ಯದಿಂದ ಅಮಾಯಕ ಪ್ರವಾಸಿಗರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಉಗ್ರರು ಈ ಕೃತ್ಯವನ್ನು ಮಾಡುವ ಮೊದಲು ಪ್ರವಾಸಿಗರ ಧರ್ಮವನ್ನು ಕೇಳಿ ಹಿಂದೂಗಳ ಮೇಲೆಯೇ ಗುಂಡು ಹಾರಿಸಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸುವ ಜತೆಗೆ ಮೃತ ಅಮಾಯಕರ ಆತ್ಮಕ್ಕೆ ಶಾಂತಿಯನ್ನು ಬಯಸುವ ಹಾಗೂ ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ತಿಳಿಸಿದ್ದಾರೆ.
ಈ ಬಗ್ಗೆ ಖಂಡನಾ ಹೇಳಿಕೆ ನೀಡಿರುವ ಶಾಸಕ ರಾಜೇಶ್ ನಾಯಕ್ ಅವರು, ಪ್ರವಾಸಿಗರ ಸ್ಮರ್ಗ ಎನ್ನುವ ಕಾರಣಕ್ಕೆ ದೇಶವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ತೆರಳುತ್ತಿದ್ದು, ಆದರೆ ಇಂತಹ ನೀಚ ಕೃತ್ಯದ ಮೂಲಕ ಉಗ್ರರು ತಮ್ಮ ರಾಕ್ಷಸೀಕತೆಯನ್ನು ಮತ್ತೆ ಪ್ರದರ್ಶಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರಕಾರವು ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ದಿಟ್ಟ ಕ್ರಮಗಳಿಂದ ಪಾಕಿಸ್ಥಾನದ ಉಗ್ರಗಾಮಿಗಳು ಹತಾಶರಾಗಿರುವುದು ಈ ದಾಳಿಯ ಮೂಲಕ ಸ್ಪಷ್ಟಗೊಂಡಿದೆ. ಕೇಂದ್ರ ಸರಕಾರವು ಉಗ್ರರ ಈ ನೀಚ ಕೃತ್ಯಕ್ಕೂ ತಕ್ಕ ಉತ್ತರವನ್ನು ನೀಡಲಿದೆ ಎಂದಿದ್ದಾರೆ.
ಕೇಂದ್ರ ಸರಕಾರವು ಮೃತಪಟ್ಟಿರುವವರ ಕುಟುಂಬಗಳ ಜತೆ ನಿಲ್ಲಲಿದ್ದು, ಗಾಯಾಳುಗಳ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲೂ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಜತೆಗೆ ಕಾಶ್ಮೀರದಲ್ಲಿ ಮತ್ತೆ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ತಿಳಿಸಿದ್ದಾರೆ.
0 comments:
Post a Comment