ಪುತ್ತೂರು, ಎಪ್ರಿಲ್ 23, 2025 (ಕರಾವಳಿ ಟೈಮ್ಸ್) : ಮಂಗಗಳು, ಕಾಡುಹಂದಿ ಹಾಗೂ ನವಿಲುಗಳ ಹಾವಳಿಯಿಂದ ಕೃಷಿ ಮತ್ತು ಫಸಲು ನಾಶದ ಬಗ್ಗೆ ಶಾಶ್ವತ ಪರಿಹಾರ ಒದಗಿಸಿ ಕೊಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಮಹಾಸಭಾ (ಎಐಕೆಎಂ) ವತಿಯಿಂದ ಪುತ್ತೂರು ಸಹಾಯಕ ಆಯುಕ್ತರ ಮುಖಾಂತರ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಹುತೇಕ ತಾಲೂಕುಗಳಲ್ಲಿ ಮಂಗಗಳ ಹಾವಳಿಯಿಂದ ಕೃಷಿ ಸಂಪತ್ತು ಕೋಟ್ಯಾಂತರ ರೂಪಾಯಿಗಳ ಫಸಲು ನಷ್ಟವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸರಕಾರದ ವತಿಯಿಂದ ಮಾಡಬೇಕಾಗಿದೆ. ಸುಮಾರು ಹದಿನಾಲ್ಕು ವರ್ಷಗಳಿಂದ ಮಂಗಗಳ ಹಾವಳಿಯನ್ನು ತಡೆಗಟ್ಟಲು ಮಂಕಿ ಪಾರ್ಕ್ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅದು ಇಲ್ಲಿಯ ತನಕ ಕಾರ್ಯಗತವಾಗಿಲ್ಲ.
ಕಳೆದ ಆಗಸ್ಟ್ 13 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ತಮ್ಮ ಕಛೇರಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆದಿದ್ದು, ಈ ಸಭೆಯಲ್ಲಿ ಮಂಕಿ ಪಾರ್ಕ್ ರಚನೆಯ ಬಗ್ಗೆ ಚರ್ಚಿಸುವ ಸಮಯದಲ್ಲಿ ಎಲ್ಲಾ ರೈತ ಮುಖಂಡರು ರೈತರಿಗೆ ಅವರು ಬೆಳೆಸಿದ ಬೆಳೆಯ ಫಸಲು ಕೈಗೆ ಬರುವಂತೆ ಮಾಡುವುದೇ ಪರಿಹಾರವೆಂದು ಒಕ್ಕೊರೊಳಿನಿಂದ ಘೋಷಣೆ ಮೊಳಗಿಸಿದ್ದರು. ಕನ್ನಡ ದಿನ ಪತ್ರಿಕೆಯಲ್ಲಿ ಮಂಗಗಳ ಹಾವಳಿಯಿಂದ ಉಂಟಾದ ನಷ್ಟಕ್ಕೆ ಪರಿಹಾರ ಧನವನ್ನು ಒದಗಿಸುವ ಬಗ್ಗೆ ಆರಣ್ಯಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಜಿಲ್ಲಾ ಅರಣ್ಯ ಸಂರಕ್ಷಾಣಾಧಿಕಾರಿಯವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ. ಈ ಪತ್ರಿಕಾ ಹೇಳಿಕೆಯಲ್ಲಿ ಹೇಳಿರುವ ವಿಚಾರವು ನಮಗೆ ಒಪ್ಪಿಗೆ ಇರುವುದಿಲ್ಲ. ರೈತರಿಗೆ ಸರಕಾರದಿಂದ ಪರಿಹಾರ ಧನ ನೀಡಿದಲ್ಲಿ ಅದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ರೈತರಿಗೆ ಅವರು ಬೆಳೆಸಿದ ಕೃಷಿಯ ಫಸಲು ಅವರ ಕೈಗೆ ಸಂಪೂರ್ಣವಾಗಿ ಸಿಕ್ಕಿದಲ್ಲಿ ರೈತರ ಆತ್ಮಕ್ಕೆ ತೃಪ್ತಿಯಾಗುತ್ತದೆ. ಹಣದ ರೂಪದಲ್ಲಿ ಸಹಾಯ ಮಾಡಿದಲ್ಲಿ ಅದರಿಂದ ರೈತರಿಗೆ ಆತ್ಮ ಸಂತೋಷ ದೊರೆಯುವುದಿಲ್ಲ ಇದಕ್ಕಾಗಿ ಕೃಷಿ ಫಸಲು ನಾಶದ ಬಗ್ಗೆ ಶಾಶ್ವತ ಪರಿಹಾರವಾಗಿ ಮಂಕಿ ಪಾರ್ಕ್ ನಿರ್ಮಿಸಿ ನಾಡಿನಿಂದ ಕಾಡಿಗೆ ಮಂಗಗಳನ್ನು ವರ್ಗಾಯಿಸಿದಲ್ಲಿ ರೈತರು ಬೆಳೆಸಿದ ಬೆಳೆಯು ಉಳಿಯುತ್ತದೆ. ಇದರಿಂದ ದೇಶದ ಜನತೆಗೆ ಆಹಾರವು ದೊರೆಯುತ್ತದೆ. ದಿನಂಪ್ರತಿ ಮಂಗಗಳ ಹಾವಳಿಯಿಂದ ರೈತರಿಗೆ ಕೃಷಿ ಫಸಲು ನಷ್ಟ ಉಂಟಾಗುತ್ತಿರುವುದರಿಂದ ಯಾವುದೇ ಸರಕಾರಕ್ಕೂ ಪರಿಹಾರಧನವನ್ನು ನೀಡಲು ಅಸಾಧ್ಯವಾಗಿರುತ್ತದೆ. ಮಂಗಗಳ ಹಾವಳಿಯನ್ನು ತಡೆಗಟ್ಟಲು ವೈಜ್ಞಾನಿಕ ರೀತಿಯಲ್ಲಿ ಮಂಕಿ ಪಾರ್ಕ್ ನಿರ್ಮಿಸಿ ಅದರಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಬಹುದು.
ಅದೇ ರೀತಿ ನವಿಲುಗಳು ಕೃಷಿ ಜಮೀನಿಗೆ ಲಗ್ಗೆ ಇಡುತ್ತಿದ್ದು ಇದರ ನಿಯಂತ್ರಣಕ್ಕೆ ನವಿಲು ಪಾರ್ಕ್ ನಿರ್ಮಾಣಕ್ಕೂ ಕೂಡ ಹಲವಾರು ವರ್ಷಗಳಿಂದ ನೀಡುತ್ತಿರುವ ಮನವಿಗಳು ಮನವಿಯಾಗಿಯೇ ಉಳಿದಿದೆ. ಹಂದಿ ಹಾಗೂ ಮುಳ್ಳು ಹಂದಿಗಳ ಕಾಟದಿಂದಾಗಿ ಆಗುವ ಕೃಷಿ ನಾಶ ನಷ್ಟಗಳನ್ನು ರಕ್ಷಿಸಲು ಕೋವಿಯನ್ನು ಬಳಸಲು ಅವಕಾಶ ನೀಡುವಂತೆ ಒತ್ತಾಯಿಸಿ ಅರಣ್ಯ ಸಚಿವರಿಗೆ ಅಖಿಲ ಭಾರತ ಕಿಸಾನ್ ಮಹಾಸಭಾ ವತಿಯಿಂದ ಈ ಮನವಿ ನೀಡಲಾಯಿತು.
ಮನವಿ ನೀಡಿದ ನಿಯೋಗದಲ್ಲಿ ರಾಜ್ಯ ಮುಖಂಡರಾದ ರಾಮಣ್ಣ ವಿಟ್ಲ, ಜಿಲ್ಲಾಧ್ಯಕ್ಷ ಮಹಾವೀರ್ ಜೈನ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ, ಕಾರ್ಯದರ್ಶಿಗಳಾದ ಪ್ರೇಮ, ಸುಧಾ ರಾವ್ ಬೆಳ್ತಂಗಡಿ, ಕುಸುಮಾವತಿ ಬೆಳ್ತಂಗಡಿ, ಮೊಯಿದಿನ್ ವಿಟ್ಲ, ಸಜೇಶ್ ವಿಟ್ಲ, ಸುಲೈಮಾನ್ ಕೆಲಿಂಜ, ಸಂಜೀವ ನಾಯಕ್ ಬೆಳ್ತಂಗಡಿ, ದಾಮೋದರ ಹಿರೇಬಂಡಾಡಿ ಇದ್ದರು.
0 comments:
Post a Comment