ಬಂಟ್ವಾಳ, ಮೇ 02, 2025 (ಕರಾವಳಿ ಟೈಮ್ಸ್) : ಬಜ್ಪೆ ಸಮೀಪದ ಕಿನ್ನಿಪದವು ಎಂಬಲ್ಲಿ ಗುರುವಾರ ರಾತ್ರಿ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಮೃತದೇಹ ಶುಕ್ರವಾರ ಬೆಳಿಗ್ಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಬಿ ಸಿ ರೋಡಿನಲ್ಲಿ ಜಮಾಯಿಸಿದ್ದ ಹಿಂದೂಪರ ಕಾರ್ಯಕರ್ತರ ಗುಂಪೊಂದು ಅಟೋ ರಿಕ್ಷಾ ಜಖಂಗೊಳಿಸಿದ ಘಟನೆ ನಡೆದಿದೆ.
ಸುಹಾಸ್ ಮೃತದೇಹ ವೀಕ್ಷಣೆಗೆಂದು ಬಿ ಸಿ ರೋಡಿನಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಭಾರೀ ಸಂಖ್ಯೆಯಲ್ಲಿ ಹಿಂದೂ ಪರ ಕಾರ್ಯಕರ್ತರು ಜಮಾಯಿಸಿದ್ದರು. ಸ್ಥಳದಲ್ಲಿ ಬಂಟ್ವಾಳ ಶಾಸಕರ ಸಹಿತ ಹಲವು ಮಂದಿ ಬಿಜೆಪಿ ಹಾಗೂ ಹಿಂದೂಪರ ಮುಖಂಡರೂ ಇದ್ದು, ಬಿಗು ಪೊಲೀಸ್ ಬಂದೋಬಸ್ತ್ ಕೂಡಾ ಮಾಡಲಾಗಿತ್ತು. ಈ ಮಧ್ಯೆ ತುಂಬೆ ಕಡೆಯಿಂದ ನಾಲ್ಕು ಮಂದಿ ಮುಸ್ಲಿಂ ವ್ಯಾಪಾರಿಗಳಿದ್ದ ಅಟೊ ರಿಕ್ಷಾವೊಂದು ಪಾಣೆಮಂಗಳೂರು ಕಡೆಗೆ ಬರುತ್ತಿತ್ತು. ಈ ಸಂದರ್ಭ ಉದ್ರಿಕ್ತಗೊಂಡ ಕೆಲ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಅಟೋ ರಿಕ್ಷಾದ ಗಾಜು ಪುಡಿ ಮಾಡಿ, ಟರ್ಪಾಲು ಹಾನಿಗೊಳಿಸಿ ಜಖಂಗೊಳಿಸಿದ್ದಾರೆ. ಅಟೋ ರಿಕ್ಷಾದಲ್ಲಿದ್ದವರಿಗೆ ಹಲ್ಲೆ ನಡೆಸಲೂ ಕೆಲವು ಮಂದಿ ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಅಟೋ ರಿಕ್ಷಾವನ್ನು ಮುಂದಕ್ಕೆ ಕಳಿಸಿದ್ದಾರೆ. ಆದರೆ ಅಟೋ ರಿಕ್ಷಾ ಸಂಪೂರ್ಣ ಹಾನಿಗೊಂಡಿದೆ. ಘಟನೆಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಘಟನೆ ಸಂದರ್ಭ ಸ್ಥಳದಲ್ಲಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ತಡೆಯಲು ಮುಂದಾದರೂ ಯುವಕರ ವರ್ತನೆ ನಿಯಂತ್ರಣ ಬಾರದೆ ಇದ್ದುದರಿಂದ ಶಾಸಕರು ಕೈಚೆಲ್ಲಿ ಸ್ಥಳದಿಂದ ತೆರಳುತ್ತಿದ್ದ ದೃಶ್ಯವೂ ವೀಡಿಯೋದಲ್ಲಿ ಕಂಡುಬಂದಿದೆ.
0 comments:
Post a Comment