ಬಂಟ್ವಾಳ, ಮೇ 23, 2025 (ಕರಾವಳಿ ಟೈಮ್ಸ್) : ಕೆ ಎಸ್ ಆರ್ ಟಿ ಸಿ ಬಸ್ಸು ಚಾಲಕನ ದುಡುಕುತನದ ಚಾಲನೆಯಿಂದ ಬಸ್ಸಿನ ಹಿಂಬದಿ ಬಾಗಿಲಿನಿಂದ ಕೆಳಕ್ಕೆ ಇಳಿಯುತ್ತಿದ್ದ ಮಹಿಳೆಯೋರ್ವರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಬಂಟ್ವಾಳ ಕಸಬಾ ಗ್ರಾಮದ ತುಂಬ್ಯ ಜಂಕ್ಷನ್ನಿನಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಲಕ್ಷ್ಮಿ ಎಂದು ಹೆಸರಿಸಲಾಗಿದೆ. ಬಿ ಸಿ ರೋಡು ಕಡೆಯಿಂದ ಬೆಳ್ತಂಗಡಿ ಕಡೆಗೆ ಮಹಾದೇವಪ್ಪ ಎಂಬವರು ಚಲಾಯಿಸಿಕೊಂಡು ಬಂದ ಕೆ ಎಸ್ ಆರ್ ಟಿ ಸಿ ಬಸ್ಸು ಬಂಟ್ವಾಳ ಕಸಬಾ ಗ್ರಾಮದ ತುಂಬ್ಯ ಜಂಕ್ಷನ್ನಿನಲ್ಲಿ ಪ್ರಯಾಣಿಕರನ್ನು ಇಳಿಸಲು-ಹತ್ತಿಸಲು ನಿಲ್ಲಿಸಿದ್ದು, ಈ ಸಂದರ್ಭ ಬಸ್ಸಿನ ಹಿಂಬದಿ ಬಾಗಿಲಿನಿಂದ ಲಕ್ಷ್ಮಿ ಅವರು ಇಳಿಯುತ್ತಿದ್ದ ವೇಳೆ ಚಾಲಕ ಏಕಾಏಕಿ ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಬಸ್ಸನ್ನು ಮುಂದೆ ಚಲಾಯಿಸಿದ ಪರಿಣಾಮ ಮಹಿಳೆ ಬಸ್ಸಿನಿಂದ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಗಾಯಗೊಂಡ ಲಕ್ಷ್ಮಿ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment