ಬಂಟ್ವಾಳ, ಮೇ 14, 2025 (ಕರಾವಳಿ ಟೈಮ್ಸ್) : ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿಯ ಪತ್ನಿಯಿಂದಲೇ ಲಂಚ ಪೀಕಿಸುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಖಜಾನೆ ಮುಖ್ಯ ಲೆಕ್ಕಿಗ ಹಾಗೂ ಎಫ್ ಡಿ ಎ ಇಬ್ಬರು ರೆಡ್ ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಬುಧವಾರ ಬಿ ಸಿ ರೋಡು ಮಿನಿ ವಿಧಾನಸೌಧದಲ್ಲಿ ನಡೆದಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಖದೀಮರನ್ನು ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಎಫ್ ಡಿ ಎ ಬಸವೇಗೌಡ ಬಿ ಎನ್ ಎಂದು ಹೆಸರಿಸಲಾಗಿದೆ.
2023ರ ಅಕ್ಟೋಬರ್ ತಿಂಗಳಲ್ಲಿ ನಿವೃತ್ತಿ ಹೊಂದಿ, 2024ರ ಜೂನ್ ತಿಂಗಳಲ್ಲಿ ಮರಣ ಹೊಂದಿದ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ನಿವೃತ್ತ ಕಾರ್ಯದರ್ಶಿಯ ಪತ್ನಿ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಅವರ ಬಳಿ ಅವರ ಗಂಡನ ಮರಣ ಉಪದಾನದ ಬಗ್ಗೆ ಎರಡು ಬಾರಿ ಹೋಗಿ ವಿಚಾರಿಸಿದರೂ ಕೆಲಸ ಆಗಿರುವುದಿಲ್ಲ.
ಈ ಬಗ್ಗೆ ಪತ್ನಿಯ ಖಾತೆಗೆ ಗಂಡನ ಮರಣ ಉಪದಾನವನ್ನು ಜಮೆ ಮಾಡಿಕೊಟ್ಟಿರುವ ಪ್ರತಿಫಲವಾಗಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಎಫ್ ಡಿ ಎ ಬಸವೇಗೌಡ ಬಿ ಎನ್ ಅವರು ತಲಾ 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅವರು ಮಂಗಳೂರು ಲೋಕಾಯುಕ್ತ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ಬುಧವಾರ ಆರೋಪಿಗಳು ಮಹಿಳೆಯಿಂದ 5 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಖದೀಮರನ್ನೂ ರೆಡ್ ಹ್ಯಾಂಡಾಗಿ ಬಲೆಗೆ ಕೆಡವಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಎಎಸ್ಪಿ ಡಾ ಗಾನ ಪಿ ಕುಮಾರ್, ಇನ್ಸ್ ಪೆಕ್ಟರ್ ಗಳಾದ ಸುರೇಶ್ ಕುಮಾರ್ ಪಿ, ಶ್ರೀಮತಿ ಭಾರತಿ ಜಿ, ಚಂದ್ರಶೇಖರ್ ಕೆ ಎನ್ ಅವರು ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
















0 comments:
Post a Comment