ಬಂಟ್ವಾಳ, ಮೇ 24, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ-ಗಾಳಿಯಿಂದ ಹಲವೆಡೆ ಮಳೆ ಹಾನಿ ಪ್ರಕರಣಗಳು ವರದಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕಾವಳಪಡೂರು ಗ್ರಾಮದ ಕೈಲಾರು ನಿವಾಸಿಗಳಾದ ಅಬೂಬಕ್ಕರ್ ಸಿದ್ದಿಕ್ ಹಾಗೂ ಅಶ್ರಫ್ ಎಂಬವರುಗಳ ಮನೆಯ ಪಕ್ಕದ ಆವರಣ ಗೋಡೆ ಕುಸಿದು ಬಿದ್ದಿದೆ. ಕಳ್ಳಿಗೆ ಗ್ರಾಮದ ನಿವಾಸಿ ಜೂಲಿಯನ ಪಿಂಟೋ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ.
ಪಂಜಿಕಲ್ಲು ಗ್ರಾಮದ ಪುಂಚೋಡಿ ನಿವಾಸಿ ರಮೇಶ ಬಿನ್ ಬಾಬು ಅವರ ಮನೆಯ ಬದಿಯಲ್ಲಿರುವ ಗುಡ್ಡ ಜರಿದಿರುತ್ತದೆ. ಕೆಳಗಿನ ಪಂಜಿಕಲ್ಲು ನಿವಾಸಿ ಭಾಗ್ಯ ಕೋಂ ರಮೇಶ್ ಅವರ ಮನೆಯ ಕಂಪೌಂಡ್ ಕುಸಿದು ಬಿದ್ದಿದೆ. ಬಿ ಮೂಡ ಗ್ರಾಮದ ನಿವಾಸಿ ಗಂಗಾಧರ ಬಿನ್ ಕಟದ ಅವರ ಮನೆಯ ಮೇಲೆ ಮರ ಬಿದ್ದು ಆಂಶಿಕ ಹಾನಿ ಸಂಭವಿಸಿದ್ದು, ಮರ ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
ಮಂಚಿ ಗ್ರಾಮದ ಕುಕ್ಕಾಜೆ ಪತ್ತುಮುಡಿ ನಿವಾಸಿ ಹನೀಫ್ ಅವರ ಮನೆ ಬದಿ ಕಾಂಪೌಂಡ್ ಕುಸಿದಿದೆ. ಅಮ್ಮುಂಜೆ ಗ್ರಾಮದ ನಿವಾಸಿ ಸುಮಲತಾ ಅವರ ತಡೆಗೋಡೆ ಕುಸಿದು ಮನೆಯ ಅಡಿಪಾಯ ಭಾಗಶಃ ಹಾನಿಯಾಗಿದೆ ಎಂದು ತಾಲೂಕು ತಹಶೀಲ್ದಾರ್ ಕಚೇರಿಯ ಮಾಹಿತಿ ತಿಳಿಸಿದೆ.
0 comments:
Post a Comment