ನವದೆಹಲಿ, ಮೇ 24, 2025 (ಕರಾವಳಿ ಟೈಮ್ಸ್) : ಈ ಬಾರಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ನಿರೀಕ್ಷೆಯಂತೆಯೇ ಭಾರತಕ್ಕೆ ನೈರುತ್ಯ ಮಾನ್ಸೂನ್ ಮಾರುತಗಳು ಆಗಮಿಸಿದ್ದು, ಶನಿವಾರ ಕೇರಳಕ್ಕೆ ಮಾನ್ಸೂನ್ ಅಪ್ಪಳಿಸಿವೆ.
ಭಾರತೀಯ ಹವಾಮಾನ ಇಲಾಖೆ ಮೇ 27ಕ್ಕೆ ಮುಂಗಾರು ಮಾರುತಗಳು ಕೇರಳ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ 3 ದಿನದ ಮೊದಲೇ ಮುಂಗಾರು ಪ್ರವೇಶವಾಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಜೂನ್ 1 ರಂದು ಮುಂಗಾರು ಮಳೆ ಭಾರತವನ್ನು ಪ್ರವೇಶಿಸುತ್ತದೆ. ಆದರೆ ಈ ಬಾರಿ ನೈಋತ್ಯ ಮಾನ್ಸೂನ್ ಕೇರಳದಲ್ಲಿ ಸಾಮಾನ್ಯ ದಿನಾಂಕಕ್ಕಿಂತ 8 ದಿನಗಳು ಮುಂಚಿತವಾಗಿ ಪ್ರಾರಂಭವಾಗಿರುವುದು ವಿಶೇಷ.
ಈ ಹಿಂದೆ 2009ರಲ್ಲಿ ಮೇ 23ಕ್ಕೆ ಮುಂಗಾರು ಮಳೆ ಪ್ರವೇಶವಾಗಿತ್ತು. 2023 ರಲ್ಲಿ ಜೂನ್ 9, 2024ರಲ್ಲಿ ಮೇ 30 ರಂದು ಮುಂಗಾರು ಪ್ರವೇಶವಾಗಿತ್ತು.
2009ರ ಬಳಿಕ ಇದೇ ಮೊದಲ ಬಾರಿಗೆ ಮಾನ್ಸೂನ್ ಮಾರುತಗಳು ನಿಗಧಿತ ಅವಧಿಗಿಂತ ಮುಂಚಿತವಾಗಿಯೇ ಭಾರತ ಪ್ರವೇಶಿಸಿವೆ. ಈ ಹಿಂದೆ 2009ರಲ್ಲಿ ಮೇ 23 ರಂದು ದಕ್ಷಿಣ ರಾಜ್ಯ ಕೇರಳಕ್ಕೆ ಮಾನ್ಸೂನ್ ಮಾರುತಗಳು ಪ್ರವೇಶ ಮಾಡಿದ್ದವು. ಬಳಿಕ ಇದೇ ಮೊದಲ ಬಾರಿಗೆ ಮಾನ್ಸೂನ್ ಮಾರುತಗಳು ಕೇರಳ ಮೂಲಕ ಭಾರತ ಪ್ರವೇಶ ಮಾಡಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್ ಜೂನ್ 1 ರ ವೇಳೆಗೆ ಕೇರಳದ ಮೇಲೆ ಪ್ರಾರಂಭವಾಗುತ್ತದೆ ಮತ್ತು ಜುಲೈ 8 ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಇದು ಸೆಪ್ಟೆಂಬರ್ 17 ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸುತ್ತದೆ ಮತ್ತು ಅಕ್ಟೋಬರ್ 15 ರ ವೇಳೆಗೆ ಸಂಪೂರ್ಣವಾಗಿ ಹಿಮ್ಮೆಟ್ಟುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ಮೇ 30 ರಂದು ದಕ್ಷಿಣ ರಾಜ್ಯದಲ್ಲಿ ಮಾನ್ಸೂನ್ ಪ್ರವೇಶಿಸಿತ್ತು, ಬಳಿಕ 2023ರಲ್ಲಿ ಜೂನ್ 8, 2022ರಲ್ಲಿ ಮೇ 29 ರಂದು, 2021ರಲ್ಲಿ ಜೂನ್ 3ರಂದು, 2020 ಜೂನ್ 1 ರಂದು, 2019 ಜೂನ್ 8 ರಂದು, 2018ರಲ್ಲಿ ಮೇ 29 ರಂದು ಮಾನ್ಸೂನ್ ಮಾರುತಗಳು ಭಾರತ ಪ್ರವೇಶ ಮಾಡಿದ್ದವು ಎಂದು ಐಎಂಡಿ ದತ್ತಾಂಶ ತೋರಿಸಿದೆ. 1975 ರಿಂದ ಲಭ್ಯವಿರುವ ದತ್ತಾಂಶವು, ಮಾನ್ಸೂನ್ ಕೇರಳವನ್ನು 1990 ರಲ್ಲಿ (ಮೇ 19 ರಂದು) ಸಾಮಾನ್ಯ ದಿನಾಂಕಕ್ಕಿಂತ 13 ದಿನಗಳ ಮೊದಲು ತಲುಪಿತ್ತು.
0 comments:
Post a Comment