ಬಂಟ್ವಾಳ, ಜೂನ್ 12, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಹಾಗೂ ವ್ಯವಸ್ಥಾಪಕ ಪದ್ಮನಾಭ ಜಿ ಅವರ ಕಾನೂನು ಬಾಹಿರ ವ್ಯವಹಾರ ಹಾಗೂ ದುರಾಡಳಿತದಿಂದ ಇಂದು ಬ್ಯಾಂಕ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂಬಂತೆ ಅಧ್ಯಕ್ಷರು ಹಾಗೂ ಎಲ್ಲಾ 12 ಮಂದಿ ನಿರ್ದೇಶಕರುಗಳು ಅನರ್ಹರಾಗುವಂತಾಗಿದ್ದು, ಬ್ಯಾಂಕಿಗೆ ಆಡಳಿತಾಧಿಕಾರಿ ನೇಮಕವಾಗಿದೆ ಎಂದು ಬ್ಯಾಂಕ್ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್ ಆರೋಪಿಸಿದ್ದಾರೆ.
ಗುರುವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಹಕಾರಿ ಕಾಯ್ದೆಯ ಕಲಂ 64ರಡಿಯಲ್ಲಿ ದ ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ತನಿಖೆ ನಡೆಸಿ ಅವ್ಯವಹಾರ ಸಾಭಿತಾದ ಹಿನ್ನಲೆಯಲ್ಲಿ ಪ್ರಸ್ತುತ ಮಂಡಳಿಯನ್ನು ಸಹಕಾರಿ ಕಾಯ್ದೆಯ ಕಲಂ 29(ಸಿ) ಅಡಿಯಲ್ಲಿ ವಜಾ ಮಾಡಿರುತ್ತಾರೆ ಮತ್ತು ಸದ್ರಿ ಆಡಳಿತ ಮಂಡಳಿಯಲ್ಲಿ ಇದ್ದ ಅಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರುಗಳನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಚುನಾವಣೆಗೆ ಸ್ಪರ್ಧಿಸದಂತೆ ಹಾಗೂ ಆಡಳಿತ ಮಂಡಳಿಯ ಯಾವುದೇ ಪದವಿಯನ್ನು ಅಲಂಕರಿಸಿದಂತೆ ಅನರ್ಹತೆಗೊಳಿಸಿ ಮೇ 27ರಂದು ಆದೇಶ ಮಾಡಲಾಗಿದೆ ಎಂದವರು ತಿಳಿಸಿದರು.
ಬ್ಯಾಂಕ್ ವ್ಯವಸ್ಥಾಪಕ ಪದ್ಮನಾಭ ಜಿ ಅವರು ಬ್ಯಾಂಕಿನಲ್ಲಿ ಕಾನೂನು ಬಾಹಿರ ವ್ಯವಹಾರಗಳನ್ನು ರಾಜಕೀಯ ಪ್ರೇರಿತವಾಗಿ ರೈತ ಸದಸ್ಯರಿಗೆ ಮಾರಕವಾಗುವ ರೀತಿಯಲ್ಲಿ ಅವ್ಯವಹಾರಗಳನ್ನು ನಡೆಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಬ್ಯಾಂಕ್ ನಿರ್ದೇಶಕರು ಮತ್ತು ಸದಸ್ಯರುಗಳು ರಾಜ್ಯ ಬ್ಯಾಂಕ್ ಅಧ್ಯಕ್ಷರಿಗೆ ದೂರು ನೀಡಿದ್ದು, ದೂರಿಗೆ ಸ್ಪಂದಿಸಿ ಕರ್ನಾಟಕ ರಾಜ್ಯ ಭೂ ಅಭಿವೃದ್ಧಿ ರಾಜ್ಯ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ತನಿಖೆ ನಡೆಸಿ ಪದ್ಮನಾಭ ಜಿ ರವರು ಬ್ಯಾಂಕಿನಲ್ಲಿ ಸಹಕಾರಿ ಕಾಯ್ದೆಗಳ ವಿರುದ್ದವಾಗಿ ಕಾನೂನು ಬಾಹಿರ ಅವ್ಯವಹಾರ ಮಾಡಿರುವುದು ಸಾಬೀತಾದ ಹಿನ್ನಲೆಯಲ್ಲಿ ಕಳೆದ ಫೆ 6 ರಂದೇ ಸೇವೆಯಿಂದ ಅಮಾನತು ಮಾಡಿ ತನಿಖೆಗೆ ಆದೇಶ ಮಾಡಿದ್ದರು ಎಂದ ಸುದರ್ಶನ್ ಜೈನ್ ಪ್ರಸ್ತುತ ಇರುವ ಆಡಳಿತ ಮಂಡಳಿಯು ಚುನಾವಣಾ ದೃಷ್ಟಿಕೋನದಿಂದ ರಾಜಕೀಯ ಪ್ರೇರಿತವಾಗಿ ಭೌಗೋಳಿಕವಾಗಿ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಕ್ಷೇತ್ರ ಮೀಸಲಾತಿಯನ್ನು ಸಹಕಾರಿ ಕಾಯ್ದೆ ಉಲ್ಲಂಘಿಸಿ ಕಳೆದ ಮಹಾಸಭೆಯಲ್ಲಿ ಬ್ಯಾಂಕಿನ ಎಲ್ಲಾ ಸದಸ್ಯರಿಗೆ ನೋಟಿಸ್ ನೀಡದೆ ಸಭೆಗೆ ಹಾಜರಾದ ಸದಸ್ಯರ ಸುಳ್ಳು ವಿವರಗಳನ್ನು ದಾಖಲಿಸಿ ನಿರಂತರ ಗಲಾಟೆ ಸೃಷ್ಟಿಸಿ ನಿರ್ಣಯ ಕೈಗೊಂಡಿದ್ದಾರೆ. ಸಹಕಾರಿ ಸಂಘಗಳ ಉಪ ನಿಬಂಧಕರಿಗೆ ಸಲ್ಲಿಸಿದ ದೂರು ಅರ್ಜಿಗೆ ಸಂಬಂಧಿಸಿ ತನಿಖೆ ನಡೆಸಿ, ಕಾನೂನು ಬಾಹಿರವಾಗಿ ಕ್ಷೇತ್ರ್ರ ಪುನರ್ ವಿಂಗಡಣೆ ಮತ್ತು ಕ್ಷೇತ್ರ ಮೀಸಲಾತಿ ನಿಗದಿ ಮಾಡಿರುವುದನ್ನು ತಿರಸ್ಕರಿಸಿ, ಈ ಹಿಂದಿನ ಚುನಾವಣೆಯಲ್ಲಿ ಇದ್ದಂತಹ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿಯನ್ನು ಮುಂದುವರಿಯುವಂತೆ ಕಳೆದ ಡಿಸೆಂಬರ್ 4ರಂದು ಆದೇಶ ಮಾಡಿರುತ್ತಾರೆ ಎಂದರು.
ಈ ಸಂದರ್ಭ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ, ಮುಹಮ್ಮದ್ ನಂದಾವರ, ಚಂದ್ರಶೇಖರ್ ಭಂಡಾರಿ, ಬಾಲಕೃಷ್ಣ ಅಂಚನ್ ಜೊತೆಗಿದ್ದರು.
















0 comments:
Post a Comment