ದುಬೈ, ಜುಲೈ 27, 2025 (ಕರಾವಳಿ ಟೈಮ್ಸ್) : ಇಂಡೋ-ಪಾಕ್ ರಾಜತಾಂತ್ರಿಕ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿದ್ದ ಬಹುನಿರೀಕ್ಷಿತ 2025ರ ಏಷ್ಯಾ ಕಪ್ ಟೂರ್ನಿಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ಸೆಪ್ಟೆಂಬರ್ 9 ರಿಂದ 28ರ ವರೆಗೆ ಯುಎಇಯಲ್ಲಿ ಪಂದ್ಯಾಕೂಟ ನಡೆಯಲಿದೆ. ಈ ಬಾರಿ ಏಷ್ಯಾ ಕಪ್ ಟೂರ್ನಿ ಟಿ-20 ಮಾದರಿಯಲ್ಲಿ ನಡೆಯಲಿದೆ. ಭಾರತ ಮತ್ತು ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ.
ಜುಲೈ 24 ರಂದು ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಟೂರ್ನಿಯ ಸ್ಥಳವನ್ನು ಅಧಿಕೃತಗೊಳಿಸಲಾಗಿದೆ. ಎಲ್ಲಾ 25 ಸದಸ್ಯ ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸಿದ್ದವು. ಸಭೆಯ ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷರೂ ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಾರಿ ಟೂರ್ನಿಯ ಹಕ್ಕು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ)ಯದ್ದೇ ಆಗಿದೆ. ಆದರೆ ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆಯಿಂದಾಗಿ 2027ರವರೆಗೂ ತಟಸ್ಥ ಸ್ಥಳಗಳಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ.
ಏಷ್ಯಾ ಕಪ್ ಟೂರ್ನಿಗಳಲ್ಲಿ ಇದುವರೆಗೆ 6 ತಂಡಗಳು ಭಾಗವಹಿಸುತ್ತಿದ್ದವು. ಈ ಬಾರಿ 8 ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಮೂರು ಬಾರಿ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಗಳೂ ಇವೆ. ಲೀಗ್ ಹಂತ, ಸೂಪರ್ ಸಿಕ್ಸ್ ಹಾಗೂ ಪ್ರಶಸ್ತಿ ಸುತ್ತಿಗೆ ತಲುಪಿದ್ರೆ ಮೂರು ಬಾರಿ ಮುಖಾಮುಖಿಯಾಗಲಿದೆ.
ಕಳೆದ ಬಾರಿ ಪಾಕ್ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾಕಪ್ ಟೂರ್ನಿ ನಡೆದಿದ್ದು, ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಇದು 2026ರ ವಿಶ್ವಕಪ್ ಟೂರ್ನಿಗೂ ಅನುಕೂಲವಾಗಲಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಏಷ್ಯಾ ಕಪ್ 2025ರ ಭವಿಷ್ಯ ಅತಂತ್ರವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ‘ಆಪರೇಷನ್ ಸಿಂಧೂರ’ ಪ್ರತೀಕಾರ ದಾಳಿಯಿಂದಾಗಿ ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತು. ಇದರಿಂದಾಗಿ ಭಾರತವು ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ವರದಿಯಾಗಿತ್ತು. ಆದ್ರೆ ಬಿಸಿಸಿಐ ಮತ್ತು ಎಸಿಸಿ ಪಾಲಿಗೆ ಲಾಭದಾಯಕವಾಗಿರುವ ಭಾರತ-ಪಾಕ್ ಪಂದ್ಯ ನಡೆಸಲು ಎಸಿಸಿ ಮನವೊಲಿಸಿದೆ.
ವೇಳಾಪಟ್ಟಿ ಪ್ರಕಾರ, ಭಾರತ ತಂಡವು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಪಂದ್ಯಾವಳಿಯಲ್ಲಿರುವ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಓಮನ್ ತಂಡಗಳು ಪಾಲ್ಗೊಳಲ್ಲಿದ್ದು, ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ಪಾಲ್ಗೊಳ್ಳಲಿದೆ. ಎಲ್ಲಾ ಪಂದ್ಯಗಳು ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ.
ಏಷ್ಯಾ ಕಪ್-2025 ವೇಳಾಪಟ್ಟಿ
ಸೆಪ್ಟೆಂಬರ್ 9 : ಅಫ್ಘಾನಿಸ್ತಾನ-ಹಾಂಗ್ ಕಾಂಗ್
ಸೆಪ್ಟೆಂಬರ್ 10 : ಭಾರತ-ಯುಎಇ
ಸೆಪ್ಟೆಂಬರ್ 11 : ಬಾಂಗ್ಲಾದೇಶ-ಹಾಂಗ್ ಕಾಂಗ್
ಸೆಪ್ಟೆಂಬರ್ 12 : ಪಾಕಿಸ್ತಾನ-ಓಮನ್
ಸೆಪ್ಟೆಂಬರ್ 13 : ಬಾಂಗ್ಲಾದೇಶ-ಶ್ರೀಲಂಕಾ
ಸೆಪ್ಟೆಂಬರ್ 14 : ಭಾರತ-ಪಾಕಿಸ್ತಾನ
ಸೆಪ್ಟೆಂಬರ್ 15 : ಶ್ರೀಲಂಕಾ-ಹಾಂಗ್ ಕಾಂಗ್
ಸೆಪ್ಟೆಂಬರ್ 15 : ಯುಎಇ-ಓಮನ್
ಸೆಪ್ಟೆಂಬರ್ 16 : ಬಾಂಗ್ಲಾದೇಶ-ಅಫ್ಘಾನಿಸ್ತಾನ
ಸೆಪ್ಟೆಂಬರ್ 17 : ಪಾಕಿಸ್ತಾನ-ಯುಎಇ
ಸೆಪ್ಟೆಂಬರ್ 18 : ಶ್ರೀಲಂಕಾ-ಅಫ್ಘಾನಿಸ್ತಾನ
ಸೆಪ್ಟೆಂಬರ್ 19 : ಭಾರತ-ಓಮನ್
ಸೂಪರ್ 4 ವೇಳಾಪಟ್ಟಿ
ಸೆಪ್ಟೆಂಬರ್ 20 : ಬಿ 1-ಬಿ 2
ಸೆಪ್ಟೆಂಬರ್ 21 : ಎ 1-ಎ 2
ಸೆಪ್ಟೆಂಬರ್ 23 : ಎ 2-ಬಿ 1
ಸೆಪ್ಟೆಂಬರ್ 24 : ಎ 1-ಬಿ 2
ಸೆಪ್ಟೆಂಬರ್ 25 : ಎ2-ಬಿ 2
ಸೆಪ್ಟೆಂಬರ್ 26 : ಎ 1-ಬಿ 1
ಸೆಪ್ಟೆಂಬರ್ 28, ಫೈನಲ್ ಪಂದ್ಯ
0 comments:
Post a Comment