ಬೆಂಗಳೂರು, ಜುಲೈ 27, 2025 (ಕರಾವಳಿ ಟೈಮ್ಸ್) : ರಾಜ್ಯಾದ್ಯಂತ ವರುಣ ಆರ್ಭಟಿಸುತ್ತಿದ್ದು, ಜುಲೈ ತಿಂಗಳ ಅಂತ್ಯದವರೆಗೂ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಭಾನುವಾರ ಮುನ್ಸೂಚನೆ ನೀಡಿದೆ.
ಮುಂದಿನ ಇನ್ನೂ 5 ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ. ಮುಖ್ಯವಾಗಿ ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೊಡಗು, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದೆ. ಜುಲೈ 31ರವರೆಗೂ ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮಲೆನಾಡು ಜಿಲ್ಲೆಗಳಲ್ಲೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಳಿದಂತೆ ಕರಾವಳಿ ಜಿಲ್ಲೆಗಳಿಗೆ ಮುಂದಿನ 2 ದಿನವೂ ಆರೆಂಜ್ ಅಲರ್ಟ್ ಇದ್ದು, ಜುಲೈ 31ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಜಿಲ್ಲೆಗಳಿಗೂ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೂ ಜುಲೈ 30 ರವರೆಗೆ ಭಾರೀ ಮಳೆಯ ಮುನ್ನೆಚ್ಚರಿಕೆ ಕೊಡಲಾಗಿದೆ. ಸೋಮವಾರದವರೆಗೆ ರಾಜ್ಯದ ಇತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದ್ದು, ನಂತರ ಮಳೆ ಪ್ರಮಾಣದಲ್ಲಿ ಇಳಿಕೆ ಆಗಲಿದೆ. ದಕ್ಷಿಣ ಕನ್ನಡ, ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಜುಲೈ 29 ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜುಲೈ 30 ಹಾಗೂ ಜುಲೈ 31 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಹವಾಮಾನ ತಂಪಾಗಿದೆ. ವಾರಾಂತ್ಯ ಮತ್ತು ಮುಂದಿನ ವಾರದವರೆಗೂ ಇದೇ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ವರದಿ ಪ್ರಕಾರ ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳ ನಿವಾಸಿಗಳು ಮುಂದಿನ ಕೆಲವು ದಿನಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸುವ ಮೂಲಕ ಹಗುರದಿಂದ ಮಧ್ಯಮ ಮಳೆಯನ್ನು ನಿರೀಕ್ಷಿಸಬಹುದು. ಹಗಲಿನ ಗರಿಷ್ಠ ತಾಪಮಾನ 24 ರಿಂದ 26 ಡಿಗ್ರಿವರೆಗೆ ಉಳಿಯುವ ಸಾಧ್ಯತೆಯಿದೆ, ಆದರೆ ರಾತ್ರಿಯ ತಾಪಮಾನವು 20 ಡಿಗ್ರಿ ಯಷ್ಟಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
0 comments:
Post a Comment