ಬಂಟ್ವಾಳ, ಜುಲೈ 23, 2025 (ಕರಾವಳಿ ಟೈಮ್ಸ್) : ತಾಲೂಕಿನ ಬ್ರಹ್ಮರಕೂಟ್ಲು ಬಳಿ ಕಾರ್ಯಾಚರಿಸುತ್ತಿರುವ ಟೋಲ್ ಪ್ಲಾಝಾ ಆರಂಭದಿಂದಲೂ ಅವ್ಯವಸ್ಥೆಯ ಆಗರವಾಗಿದ್ದು, ಹಲವು ಬಾರಿ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿ ಪ್ರತಿಭಟನೆಗಳ ಸರಣಿಯೇ ನಡೆದಿರುವುದು ಇದೀಗ ಇತಿಹಾಸ. ಇದೀಗ ಇಲ್ಲಿನ ಟೋಲ್ ಪ್ಲಾಝಾ ಬಳಿ ಹೆದ್ದಾರಿಯಲ್ಲಿ ಬೀದಿ ದೀಪಗಳೇ ಇಲ್ಲದೆ ಇಡೀ ಪರಿಸರದಲ್ಲಿ ಕಾರ್ಗತ್ತಲು ಆವರಿಸಿದ್ದು, ಕತ್ತಲಲ್ಲೇ ಇಲ್ಲಿನ ಸಿಬ್ಬಂದಿಗಳು ಸುಂಕ ವಸೂಲಿ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಈ ಪ್ರದೇಶದಲ್ಲಿ ಮೂರು ಬೃಹತ್ ಮರ್ಕ್ಯುರಿ ಕಂಬಗಳು ಹಾಗೂ 14 ಬೀದಿ ದೀಪಗಳ ಕಂಬಗಳಿದ್ದರೂ ಅದ್ಯಾವುದರಲ್ಲೂ ದೀಪಗಳೇ ಉರಿಯದೆ ತಿಂಗಳುಗಳು ಹಲವು ಕಳೆದಿವೆ. ಕೆಲವು ಕಂಬದಲ್ಲಿ ದೀಪಗಳಿದ್ದರೂ ಅದು ಉರಿಯುತ್ತಿಲ್ಲ. ಇನ್ನು ಕೆಲವು ಕಂಬಗಳಲ್ಲಿ ದೀಪಗಳು ನೇತಾಡುತ್ತಿವೆ. ನೂತನವಾಗಿ ಬೃಹತ್ ವಿದ್ಯುತ್ ಕಂಬ ಅಳವಡಿಸಲು ತೋಡಲಾಗಿರುವ ಹೊಂಡದಲ್ಲಿ ಮಳೆ ನೀರು ತುಂಬಿಕೊಂಡಿರುವುದು ಕಂಡು ಬರುತ್ತಿದೆ. ಬಂಟರ ಭವನದ ಬಳಿ ಇರುವ ಸೇತುವೆಯಿಂದ ಬ್ರಹ್ಮರಗುಡಿ ಇರುವ ಸೇತುವೆ ತನಕ ಸಾಲು ಸಾಲು ವಿದ್ಯುತ್ ಕಂಬಗಳು, ಬೃಹತ್ ಮರ್ಕ್ಯುರಿ ಕಂಬಗಳಿದ್ದರೂ ಅದರಲ್ಲಿ ದೀಪಗಳು ಉರಿಯದೇ ಟೋಲ್ ಗೇಟ್ ಸಿಬ್ಬಂದಿಗಳು ಹಾಗೂ ವಾಹನ ಸವಾರರು, ಸಾರ್ವಜನಿಕರು ಕತ್ತಲಲ್ಲೇ ಪರದಾಡುವ ಪರಿಸ್ಥಿತಿ ಇದೆ.
ಇಲ್ಲಿ ಬೀದಿ ದೀಪಗಳಿಲ್ಲದೆ ಇರುವುದರಿಂದ ಟೋಲ್ ಗೇಟ್ ಸುಂಕ ವಸೂಲಿ ಮಾಡುವ ಸಿಬ್ಬಂದಿಗಳಿಗೂ ಭಯ ಕಾಡುತ್ತಿದೆ. ಕತ್ತಲಲ್ಲಿ ಬರುವ ವಾಹನ ಸವಾರರ ವಾಹನಗಳ ಹೆಡ್ ಲೈಟ್ ಬಿಟ್ಟರೆ ಇಲ್ಲಿ ಬೆಳಕಿಗೆ ಯಾವುದೇ ವ್ಯವಸ್ಥೆ ಇಲ್ಲ. ಮಳೆ ಬರುವ ಸಂದರ್ಭದಲ್ಲಂತೂ ಸುಂಕ ವಸೂಲಿ ಸಿಬ್ಬಂದಿಗಳು ಜೀವ ಕೈಯಲ್ಲಿ ಹಿಡಿದು ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದ್ದು, ಸಿಬ್ಬಂದಿಗಳ ಜೀವಕ್ಕೆ ಯಾವುದೇ ಭದ್ರತೆ ಇದ್ದಂತೆ ಕಂಡು ಬರುತ್ತಿಲ್ಲ. ಸುಂಕ ವಸೂಲಿ ಕೇಂದ್ರ ಮೊದಲೇ ಇಕ್ಕಟ್ಟಾದ ಅವ್ಯವಸ್ಥೆಯ ಆಗರದ ಪ್ರದೇಶದಲ್ಲಿದ್ದು, ಇಲ್ಲಿನ ಕತ್ತಲ ಕೂಪ ಇನ್ನಷ್ಟು ಸಮಸ್ಯೆ ಉಂಟು ಮಾಡಿದೆ ಎಂದು ವಾಹನ ಸವಾರರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪ್ರದೇಶದಲ್ಲಿ ಅಫಘಾತ ತಡೆಯುವ ನಿಟ್ಟಿನಲ್ಲಿ ರಸ್ತೆ ವಿಭಜಿಸಲು ತಂದಿರಿಸಲಾಗಿರುವ ಸುಮಾರು 25ಕ್ಕೂ ಹೆಚ್ಚಿನ ರಸ್ತೆ ವಿಭಜಕ ಕಾಂಕ್ರಿಟ್ ಬ್ಲಾಕುಗಳು ಸೂಕ್ತವಾಗಿ ಅಳವಡಿಸದೆ ಹೆದ್ದಾರಿಯಲ್ಲೇ ರಾಶಿ ಹಾಕಲಾಗಿದ್ದು ಕಂಡು ಬರುತ್ತಿದೆ. ಇದೂ ಕೂಡಾ ಇಲ್ಲಿ ಅಪಾಯಕ್ಕೆ ಆಹ್ವಾನವನ್ನು ನೀಡಿದಂತಿದೆ.
ಒಟ್ಟಿನಲ್ಲಿ ಅವ್ಯವಸ್ಥೆಯ ಆಗರವಾಗಿರುವ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಬಳಿ ಹೆದ್ದಾರಿ ಬದಿಯಲ್ಲಿ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ಯೋಗ್ಯವಾದ ಶೌಚಾಲಯ ವ್ಯವಸ್ಥೆಯೂ ಇಲ್ಲ. ಸದ್ಯ ಇಲ್ಲಿನ ಸರ್ವಿಸ್ ರಸ್ತೆಯ ಬಳಿ ನಿರ್ಮಾಣವಾಗಿರುವ ಶೌಚಾಲಯ ಹೆದ್ದಾರಿ ಪ್ರಯಾಣಿಕರಿಗೆ ಪ್ರಯೋಜನಕ್ಕೆ ಬಾರದೆ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ. ಇಲ್ಲಿನ ಟೋಲ್ ಪ್ಲಾಝಾವನ್ನು ನಿರಂತರ ಹಾದು ಹೋಗುತ್ತಿರುವ ಸಂಸದರು, ಸಚಿವರುಗಳು, ಶಾಸಕರುಗಳ ಸಹಿತ ಜನಪ್ರತಿನಿಧಿಗಳಾಗಲೀ, ಅಧಿಕಾರಿ ವರ್ಗವಾಗಲೀ ಇಲ್ಲಿನ ಸಮಸ್ಯೆಯ ಗಂಭೀರತೆ ಬಗ್ಗೆ ಇನ್ನೂ ತಿಳಿದುಕೊಂಡಂತಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ನಿತ್ಯ ನಿರಂತರ ಎಂಬಂತೆ ಸಚಿತ್ರ ವರದಿ ಮೂಲಕ ಬೆಳಕು ಚೆಲ್ಲಿದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಾ ಕಣ್ಣಿದ್ದೂ ಕುರುಡಾಗಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
0 comments:
Post a Comment