ಬಂಟ್ವಾಳ , ಜುಲೈ 04, 2025 (ಕರಾವಳಿ ಟೈಮ್ಸ್) : ಮೇಯಲು ಬಿಟ್ಟಿದ್ದ ಎರಡು ಗಂಡು ಕರುಗಳನ್ನು ರಿಟ್ಝ್ ಕಾರಿನಲ್ಲಿ ತುಂಬಿಸಿ ಕಳವು ಮಾಡಿಕೊಂಡು ಹೋದ ಘಟನೆ ಅಮ್ಮುಂಜೆ ಗ್ರಾಮದ ಕಲಾಯಿ ಎಂಬಲ್ಲಿ ಜೂನ್ 29 ರಂದು ನಡೆದಿದ್ದು, ಸೀಸಿ ಕ್ಯಾಮೆರಾ ದೃಶ್ಯಾವಳಿ ಆಧಾರದಲ್ಲಿ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ತಾಲೂಕು, ಮಲ್ಲೂರು ಗ್ರಾಮದ ಘಟ್ನಬೆಟ್ಟು ನಿವಾಸಿ ಜಗದೀಶ್ ಕುಲಾಲ್ (42) ಎಂಬವರು 12 ದನ ಕರುಗಳನ್ನು ಸಾಕಿದ್ದು, ಅವರಿಗೆ ಸೇರಿದ ಜಾಗದಲ್ಲಿ ದನಗಳನ್ನು ಮೇಯಲು ಬಿಡುತ್ತಿದ್ದರು. ಎಂದಿನಂತೆ ಜೂನ್ 28 ರಂದು ಬೆಳಿಗ್ಗೆ 8.30 ಗಂಟೆಗೆ ಮನೆಯ ಹಟ್ಟಿಯಿಂದ ಹಸು ಹಾಗೂ ಕರುಗಳನ್ನು ಮೇಯಲು ಬಿಟ್ಟಿದ್ದು, ಮೇಯಲು ಬಿಟ್ಟ ಹಸುಗಳ ಪೈಕಿ ಸುಮಾರು 2 ವರ್ಷ ಪ್ರಾಯದ 2 ಗಂಡು ಕರುಗಳು ಮನೆಗೆ ಬಂದಿರುವುದಿಲ್ಲ. ಮನೆಗೆ ವಾಪಾಸು ಬಾರದ ಗಂಡು ಕರುಗಳ ಬಗ್ಗೆ ಮನೆಯ ಹತ್ತಿರ ಸುತ್ತ ಮುತ್ತಲೂ ವಿಚಾರಿಸಿದಾಗ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಬಳಿಕ ಅಮ್ಮುಂಜೆ ಗ್ರಾಮದ, ಕಲಾಯಿ ಎಂಬಲ್ಲಿ ರಸ್ತೆಗೆ ಕಾಣುವಂತಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಜೂನ್ 29 ರಂದು ಬೆಳಗ್ಗಿನ ಜಾವ ಸುಮಾರು 4.30 ರ ವೇಳೆಗೆ ಜಗದೀಶ್ ಕುಲಾಲ್ ಅವರ ಎರಡು ಗಂಡು ಕರುಗಳನ್ನು ಎರಡು ಜನ ವ್ಯಕ್ತಿಗಳು ರಿಡ್ಜ್ ಕಾರಿನಲ್ಲಿ ತುಂಬಿಸಿ ಹೋಗುವ ದೃಶ್ಯಾವಳಿ ಸೆರೆಯಾಗಿರುತ್ತದೆ. ಸದ್ರಿ ಮೇಯಲು ಹೋಗಿದ್ದ ಕಪ್ಪು ಮೈ ಬಣ್ಣದ ಗಂಡು ಕರು ಹಾಗೂ ಕೆಂಪು ಮೈಬಣ್ಣದ ಗಂಡು ಕರು ಕರುಗಳನ್ನು ಯಾರೋ ಅಪರಿಚಿತರು ಕಲಾಯಿ ಎಂಬ ಸ್ಥಳದಿಂದ ಕಳವು ಮಾಡಿಕೊಂಡು ಹೋಗಿರುವುದು ದೃಢಪಟ್ಟಿದೆ. ಕಳವಾದ 2 ಗಂಡು ಕರುಗಳ ಒಟ್ಟು ಮೌಲ್ಯ ಸುಮಾರು 40 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಜಗದೀಶ್ ಕುಲಾಲ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment