ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡುವುದು ಒಪ್ಪತಕ್ಕದ್ದಲ್ಲ : ಸಿ.ಪಿ.ಐ.ಎಂ.ಎಲ್ ಲಿಬರೇಶನ್ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ - Karavali Times ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡುವುದು ಒಪ್ಪತಕ್ಕದ್ದಲ್ಲ : ಸಿ.ಪಿ.ಐ.ಎಂ.ಎಲ್ ಲಿಬರೇಶನ್ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ - Karavali Times

728x90

16 July 2025

ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡುವುದು ಒಪ್ಪತಕ್ಕದ್ದಲ್ಲ : ಸಿ.ಪಿ.ಐ.ಎಂ.ಎಲ್ ಲಿಬರೇಶನ್ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ

ಮಂಗಳೂರು, ಜುಲೈ 16, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಹೆಸರು ಬದಲಾವಣೆ ಮಾಡಲು ಅಭಿಯಾನ ನಡೆಯುತ್ತಿದ್ದು, ಜಿಲ್ಲೆಯ ಹೆಸರು ಬದಲಾವಣೆ  ಮಾಡುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಈಗಾಗಲೇ ಹಿಂದುಳಿದಿರುವ ಸುಳ್ಯ, ಬೆಳ್ತಂಗಡಿ, ಕಡಬ, ಬಂಟ್ವಾಳ, ಪುತ್ತೂರು, ಉಳ್ಳಾಲ, ಮೂಲ್ಕಿ ಹಾಗೂ ಮೂಡಬಿದ್ರೆ ಸೇರಿದಂತೆ ಎಲ್ಲಾ ತಾಲೂಕುಗಳ ಅಭಿವೃದ್ಧಿಯ ಮೇಲೆ ನೇರ ಪರಿಣಾಮ ಬೀಳಲಿದೆ.  ಈಗಾಗಲೇ ಈ ತಾಲೂಕುಗಳು ರಾಜಕೀಯವಾಗಿ, ಆರ್ಥಿಕವಾಗಿ ಅವಕಾಶದಿಂದ ವಂಚಿತವಾಗಿದೆ. ಜಿಲ್ಲಾ ಕೇಂದ್ರದಿಂದ ದೂರವಿರುವ ಕಾರಣ ಇನ್ನು ಮಂಗಳೂರು ಜಿಲ್ಲೆಯಾದರೆ ಮತ್ತಷ್ಟು ಅವಕಾಶಗಳಿಂದ ವಂಚಿತವಾಗುವ ಸಂಭವವಿರುವುದರಿಂದ ಜಿಲ್ಲೆಯ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ವಾದಿ, ಲೆನಿನ್ ವಾದಿ) ಲಿಬರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ. 

ಜಿಲ್ಲಾ ಅಪರ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ ಕಮ್ಯುನಿಸ್ಟ್ ನಿಯೋಗ, ದಕ್ಷಿಣ ಕನ್ನಡ ಜಿಲ್ಲೆ ಹಲವು ತಾಲೂಕುಗಳ ಒಂದು ಒಕ್ಕೂಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಒಂದು ಬಹು ಸಂಸ್ಕೃತಿಯ ನಾಡಾಗಿದ್ದು, ಮಂಗಳೂರಿನ ತುಳು ಭಾಷೆ, ಸಂಸ್ಕೃತಿಗೂ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ, ಬಂಟ್ಬಾಳದ ತುಳು ಭಾಷೆ ಮತ್ತು ಸಂಸ್ಕೃತಿಗೂ ಇನ್ನಿತರ ಆಚರಣೆಗಳಿಗೂ  ಹಲವಾರು  ವ್ಯತ್ಯಾಸಗಳಿವೆ. ಈ ಬಹು ಸಂಸ್ಕೃತಿಯ ಮೇಲೆ ಏಕಮುಖ ಸಂಸ್ಕೃತಿಯು ಪರಿಣಾಮ ಬೀರಲಿದೆ. ತುಳುನಾಡು ಎನ್ನುವುದನ್ನು ಮುಂದಿಟ್ಟು ನಡೆಯುತ್ತಿರುವ ಮಂಗಳೂರು ಜಿಲ್ಲಾ ಅಭಿಯಾನವು ತುಳುನಾಡಿನ ಬಹು ಸಂಸ್ಕೃತಿಗೆ ವಿರೋಧವಾಗಿರುವ ಅಭಿಯಾನವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯು ಬ್ಯಾರಿ, ಕೊಂಕಣಿ, ಕನ್ನಡ ಸೇರಿದಂತೆ ಬಹುಭಾಷೆಗಳಿಂದ ರೂಪಿತವಾದ ಪ್ರದೇಶವಾಗಿದ್ದು ಇದನ್ನು ಬದಿಗಿಟ್ಟು ಕೇವಲ ‘ತುಳುವನ್ನು ಕೇಂದ್ರೀಕರಿಸಿ ಅಭಿಯಾನ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಹೆಸರು ಬದಲಾವಣೆ ಮಾಡುವುದು ಈ ನಾಡಿನ ಇತಿಹಾಸಕ್ಕೆ ಹಾಗೂ ವಿವಿಧ ಸಂಸ್ಕೃತಿಗಳಿಗೆ ಮಾಡುವ ಅನ್ಯಾಯವಾಗುತ್ತದೆ ಎಂದಿರುವ ನಿಯೋಗ ಸಾಂಸ್ಕೃತಿಕವಾಗಿ ಮಾತ್ರವಲ್ಲದೇ ಬೌಗೋಳಿಕವಾಗಿಯೂ ದಕ್ಷಿಣ ಕನ್ನಡದ ಎಲ್ಲಾ ತಾಲೂಕುಗಳು ಭಿನ್ನತೆಯನ್ನು ಹೊಂದಿದೆ. ರಾಜ್ಯದ ಇತರ ಜಿಲ್ಲೆಗಳಂತೆ ಇಡೀ ಜಿಲ್ಲೆ ಒಂದೇ ಬೌಗೋಳಿಕ ಸನ್ನಿವೇಶವನ್ನು ದಕ್ಷಿಣ ಕನ್ನಡ ಜಿಲ್ಲೆ ಹೊಂದಿಲ್ಲ. ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರು ಬಂಟ್ವಾಳ, ಉಳ್ಳಾಲ, ಮೂಲ್ಕಿ, ಮೂಡಬಿದ್ರೆ ತಾಲೂಕಿನ ಹಲವಾರು ಗ್ರಾಮಗಳು ಇನ್ನೂ ಕುಗ್ರಾಮಗಳ ಸ್ಥಿತಿಯಲ್ಲಿದೆ ಹಾಗೂ ಎಲ್ಲಾ ಸೌಲಭ್ಯಗಳಿಂದ ಮರೀಚಿಕೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಮಂಗಳೂರು ನಗರ ಕೇಂದ್ರಿತ ಅಭಿವೃದ್ದಿಯು ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ, ಉಳ್ಳಾಲ, ಮೂಲ್ಕಿ ಮೂಡಬಿದ್ರೆ, ಕಡಬವನ್ನು ಅಭಿವೃದ್ದಿಪಡಿಸಲು ಸಾಧ್ಯವಿಲ್ಲ. ಆಡಳಿತ ವಿಕೇಂದ್ರಿಕರಣಗೊಂಡಿದ್ದರೂ ನಗರ ಕೇಂದ್ರಿತ ಮನಸ್ಥಿತಿಯಿಂದಾಗಿ ಬೆಳ್ತಂಗಡಿ, ಸುಳ್ಯ, ಕಡಬದ ಹಳ್ಳಿಗಳಿಗೆ ಆಡಳಿತದ ಗಮನ ಇಲ್ಲದೇ ಇರುವುದು ಈಗಾಗಲೇ ಆ ಪ್ರದೇಶಗಳು ಹಿಂದುಳಿದಿರುವುದನ್ನು ಕಾಣಬಹುದು ಎಂದಿರುವ ಸಮಿತಿ ನಿಯೋಗ ನಗರ ಕೇಂದ್ರಿತ ಅಭಿವೃದ್ದಿಯಿಂದಾಗಿಯೇ ಇನ್ನೂ ಕೂಡಾ ಹಲವು ಗ್ರಾಮಗಳಲ್ಲಿ ಆಸ್ಪತ್ರೆಗಳಿಗೆ ಜನರನ್ನು ಹೊತ್ತುಕೊಂಡು ಹೋಗಬೇಕಾದ, ನದಿ ದಾಟಬೇಕಾದ ಸ್ಥಿತಿ ಇದೆ. ದಕ್ಷಿಣ ಕನ್ನಡ ಜಿಲ್ಲೆ ಎಂಬ ವಿಕೇಂದ್ರಿಕರಣ ಸೂಚಕ ಹೆಸರಿದ್ದಾಗ್ಯೂ ಯಾವುದೇ ಅನುದಾನಗಳು, ಯೋಜನೆಗಳು ಈ ಗ್ರಾಮಗಳನ್ನು ತಲುಪಿಲ್ಲ. ಇನ್ನು ಮಂಗಳೂರು ನಗರ ಕೇಂದ್ರಿತವಾಗಿ ಜಿಲ್ಲೆಯ ಹೆಸರು ಬದಲಾವಣೆಯಾದರೆ ಈ ಪ್ರದೇಶಗಳು ಮತ್ತಷ್ಟು ಅಭಿವೃದ್ಧಿಯಿಂದ ವಂಚನೆಗೆ ಒಳಗಾಗುವ ಸನ್ನಿವೇಶಗಳು ಉಂಟಾಗುತ್ತದೆ. ಇದಲ್ಲದೇ ಮಂಗಳೂರು ಜಿಲ್ಲೆ ಎನ್ನುವುದು ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ, ಸುಳ್ಯ, ಮೂಲ್ಕಿ, ಮೂಡಬಿದ್ರೆ, ಉಳ್ಳಾಲ ಸೇರಿದಂತೆ ಎಲ್ಲಾ ತಾಲೂಕುಗಳ ರಾಜಕೀಯ ಅವಕಾಶವನ್ನು ಕಸಿದುಕೊಳ್ಳುತ್ತದೆ. ಅಲ್ಲದೆ ಬೆಳ್ತಂಗಡಿ, ಸುಳ್ಯ, ಪುತ್ತೂರು ಭಾಗದಲ್ಲಿ ಹೆಚ್ಚಿನ ಜನ ಕೃಷಿಯನ್ನೇ ನಂಬಿ ಜೀವನ ನಡೆಸುವವರಾಗಿದ್ದು ನಗರ ಕೇಂದ್ರಿತ ಅಭಿವೃದ್ಧಿಯಿಂದ ಕೃಷಿಗೆ ಬೇಕಾದ ಉತ್ತೇಜನಗಳು ಕೂಡಾ ಕಡಿಮೆಯಾಗುತ್ತದೆ. ಅಲ್ಲದೆ ಈಗಾಗಲೇ ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸುವ ಬೀದಿಯಲ್ಲಿರುವ ಬೆಳ್ತಂಗಡಿ ಭಾಗದ ಕಾಡುತ್ಫಿಯನ್ನೇ ನಂಬಿ ಜೀವನ ನಡೆಸುವ ಆದಿವಾಸಿ ಸಮುದಾಯಗಳು ಕೂಡಾ ಮತ್ತಷ್ಟು ತೊಂದರೆಗೆ ಒಳಗಾಗುವ ಸನ್ನಿವೇಶ ಉಂಟಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾವಣೆ ಮಾಡುವುದು ಯಾವುದೇ ವಿಷಯದಲ್ಲೂ ಒಪ್ಪತಕ್ಕ ವಿಚಾರವಲ್ಲ ಎಂದು ನಿಯೋಗ ಸಿಎಂ ಅವರಿಗೆ ಮನವರಿಕೆ ಮಾಡಿದೆ. 

ಈಗಾಗಲೇ ಜಿಲ್ಲೆಯಲ್ಲಿ ಧರ್ಮಾಧಾರಿತ ವಿಷಯಗಳು, ಕೋಮು ಸಂಘರ್ಷಗಳು ಜಿಲ್ಲೆಗೆ ಕಳಂಕ ತಂದಿದೆ. ಹೆಸರು ಬದಲಾವಣೆಗಿಂತ ಮುಖ್ಯವಾಗಿ ಇಲ್ಲಿನ ಸೌಹಾರ್ಧತೆ, ಜನರ ಬದುಕಿನ ಪ್ರಶ್ನೆಗಳು, ಉದ್ಯೋಗ, ಅಭಿವೃದ್ಧಿ ಮುಂತಾದ ವಿಷಯಗಳ ಬಗ್ಗೆ ಗಮನಕೊಡವುದು ಮಹತ್ವದ ವಿಚಾರವಾಗಿದೆ.

ಯಾವುದೇ ಕಾರಣಕ್ಕೂ ಬಹು ಸಂಸ್ಕತಿಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಬಾರದು ಹಾಗೂ ಜಿಲ್ಲೆಯ ಕೋಮು ಸೌಹಾರ್ದತೆ ಗೆ ಧಕ್ಕೆ ಉಂಟುಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿರುವ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು ಎಂದು ಸಮಿತಿ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದೆ. 

ನಿಯೋಗದಲ್ಲಿ ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ ಇ, ಜಿಲ್ಲಾ ಸಮಿತಿ ಸದಸ್ಯರಾದ ರಾಜಾ ಚೆಂಡ್ತಿಮಾರ್, ಸಜೇಶ್ ವಿಟ್ಲ, ಬಂಟ್ವಾಳ ತಾಲೂಕು ಸಮಿತಿ ಮುಖಂಡರಾದ ಅಚ್ಯುತ ಕಟ್ಟೆ, ಲಿಯಾಕತ್ ಖಾನ್, ಮಂಗಳೂರು ತಾಲೂಕು ಮುಖಂಡ ಮಹಮ್ಮದ್ ಝಿಲಾನಿ ಮೊದಲಾದವರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡುವುದು ಒಪ್ಪತಕ್ಕದ್ದಲ್ಲ : ಸಿ.ಪಿ.ಐ.ಎಂ.ಎಲ್ ಲಿಬರೇಶನ್ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ Rating: 5 Reviewed By: karavali Times
Scroll to Top