ದರ್ಮಸ್ಥಳ, ಜುಲೈ 29, 2025 (ಕರಾವಳಿ ಟೈಮ್ಸ್) : ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರು ಮತ್ತು ಬಾಲಕಿಯರ ಶವ ಹೂತು ಹಾಕಿದ್ದೇನೆ. ಅವುಗಳನ್ನು ತೋರಿಸಿಕೊಡಲು ಸಿದ್ದ ಎಂದು ಹೇಳಿ ದೂರು ನೀಡಿದ್ದ ಅನಾಮಿಕ ದೂರುದಾರನನ್ನು ಸೋಮವಾರ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಸ್ಥಳ ಮಹಜರಿಗೆ ಕರೆದುಕೊಂಡು ಬಂದಿದ್ದಾರೆ. ವಿಶೇಷ ಭದ್ರತೆಯಲ್ಲಿ ಈ ಕಾರ್ಯ ನಡೆದಿದ್ದು, ಶವ ಹೂತಿರುವ ಸ್ಥಳಗಳನ್ನು ಪತ್ತೆ ಮಾಡುವ ಕೆಲಸ ನಡೆಸಲಾಗಿದೆ. ಕರೆದುಕೊಂಡು ಹೋಗಿರುವ ಸೋಮವಾರ ಒಂದೇ ದಿನ 13 ಶವಗಳನ್ನು ಹೂತಿರುವ ಸ್ಥಳಗಳನ್ನು ದೂರುದಾರ ಪತ್ತೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ನೇತ್ರಾವತಿ ನದಿ ತಟದ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಬಗ್ಗೆ ದೂರುದಾರ ನೀಡಿರುವ ಹೇಳಿಕೆ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಇದೀಗ ಪ್ರಕರಣ ಒಂದು ಹಂತಕ್ಕೆ ಬಂದಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಎಸ್ಐಟಿ (ವಿಶೇಷ ತನಿಖಾ ತಂಡ) ಸೋಮವಾತ 15 ಶಂಕಿತ ಸ್ಥಳಗಳನ್ನು ಗುರುತಿಸುವ ಯೋಜನೆ ಮಾಡಿಕೊಂಡಿದ್ದರೂ, ಒಂದು ದಿನದಲ್ಲಿ 13 ಸ್ಥಳಗಳನ್ನಷ್ಟೇ ಗುರುತಿಸಲು ಸಾಧ್ಯವಾಗಿದೆ. ನನ್ನ ಕುಟುಂಬದ ಬಾಲಕಿಗೆ ಲೈಂಗಿಕ ದೌರ್ಜನ್ಯವಾಗಿದೆ ಹಾಗೂ ಶವ ಹೂತು ಹಾಕಿದ್ದೇನೆ ಎಂದು ಹೇಳಿರುವ ಅನಾಮಿಕ ವ್ಯಕ್ತಿ ಇಂದು ತಾನು ಹೇಳಿದಂತೆಯೇ ಎಸ್ಐಟಿ ತಂಡದೊಂದಿಗೆ ಶವ ಪತ್ತೆ ಕಾರ್ಯಕ್ಕೆ ಸಹಕಾರ ನೀಡಿದ್ದಾನೆ.
ಸೋಮವಾರ ದೂರುದಾರ ಗುರುತಿಸಿರುವ 13 ಜಾಗಗಳನ್ನು ಬಿಗು ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಧ್ಯಾಹ್ನದ ವೇಳೆಗೆ 8 ಸ್ಥಳಗಳನ್ನು ಪರಿಶೀಲಿಸಲಾಯಿತು. ನಂತರ ಅನಾಮಿಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಊಟ ಮುಗಿಸಿದ ಬಳಿಕ ಇನ್ನೂ 5 ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾನೆ.
ಎಸ್‌ಐಟಿ ತಂಡ ಸೋಮವಾರ ಬೆಳಗ್ಗೆ ಸ್ನಾನಘಟ್ಟದ ಎಡ ಭಾಗದಲ್ಲಿರುವ ಅರಣ್ಯ ಸ್ಥಳದಲ್ಲಿ ಪರಿಶೀಲನೆ ಮಾಡಿತ್ತು. ಬಳಿಕ ನೇತ್ರಾವತಿ ಸೇತುವೆ ಹಾಗೂ ಸ್ನಾನ ಘಟ್ಟದ ಮಧ್ಯಭಾಗದ ಕಾಡಿನಲ್ಲಿ ಸ್ಥಳ ಪರಿಶೀಲಿಸಿ, ಮೂರನೇ ಸ್ಥಳವಾಗಿ ನೇತ್ರಾವತಿ ಸ್ನಾನಘಟ್ಟದ ಬಲ ಭಾಗದ ಅಜಿಕುರಿ ರಸ್ತೆಯಲ್ಲಿ ಸ್ಥಳ ಪರಿಶೀಲನೆ ಮಾಡಿತ್ತು.
ನೇತ್ರಾವತಿ ಸ್ನಾನಘಟ್ಟ ಹಾಗೂ ಸಮೀಪದ ಕಾಡಿನಲ್ಲಿ ಒಳಗೆ 1 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 2 ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ್ದರು. ದೂರುದಾರ ತಂದಿರುವ ತಲೆಬುರುಡೆಯಲ್ಲಿದ್ದ ಮಣ್ಣಿನ ತಾಳೆಗಾಗಿ ನೇತ್ರಾವತಿ ಸ್ನಾನಘಟ್ಟದ ಅರಣ್ಯ ಪ್ರದೇಶದಲ್ಲಿ ಮಣ್ಣನ್ನು ಎಸ್‌ಐಟಿ ಸಂಗ್ರಹಿಸಿದೆ. ನಂತರ ದೂರುದಾರನನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಎಸ್‌ಐಟಿ ತಂಡ ಕರೆದೊಯ್ದಿದೆ
ಎಸ್‌ಐಟಿ ವಿಚಾರಣೆ ವೇಳೆ ದೂರುದಾರ, ತಲೆ ಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಹೊರತೆಗೆದಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆ ಎಸ್‌ಐಟಿ ತಂಡವು ವಿಧಿ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಸ್ಥಳ ಮಹಜರು ಆರಂಭಿಸಿದ್ದರು.
ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸಿ.ಎ. ಸೈಮನ್, ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಸೇರಿ ಪ್ರಮುಖ ಅಧಿಕಾರಿಗಳು ಹಾಜರಿದ್ದರು.
0 comments:
Post a Comment