ಬೆಳ್ತಂಗಡಿ, ಜುಲೈ 11, 2025 (ಕರಾವಳಿ ಟೈಮ್ಸ್) : ಧರ್ಮಸ್ಥಳ ಗ್ರಾಮದ ಸುತ್ತಮುತ್ತ 100 ಕ್ಕೂ ಹೆಚ್ಚು ಮೃತ ದೇಹಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಪೊಲೀಸ್ ದೂರು ನೀಡಿದ್ದ ವ್ಯಕ್ತಿ ಶುಕ್ರವಾರ (ಜುಲೈ 11) ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ತನ್ನ ಕಾನೂನು ಸಲಹೆಗಾರರ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಜುಲೈ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್ ದೇಶಪಾಂಡೆ ಮೂಲಕ ದೂರು ದಾಖಲಾಗಿತ್ತು.
ಇಂದು (ಜುಲೈ 11) ಆ ವ್ಯಕ್ತಿ ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ. ಅವರು ಸಂಜೆ 4.30 ರ ವೇಳೆಗೆ ಇನ್ನೋವಾ ಕಾರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಗುರುತು ಮರೆಮಾಚುವಂತೆ ಬಟ್ಟೆಗಳನ್ನು ಮುಚ್ಚಿಕೊಂಡು ವಕೀಲರ ಸಮ್ಮುಖದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿರುವ ಜಿಲ್ಲಾ ಎಸ್ಪಿ ಅವರು, ಜಿಲ್ಲೆಯ ಸಕ್ಷಮ ಪ್ರಾಧಿಕಾರವು ಸದ್ರಿ ಪ್ರಕರಣದಲ್ಲಿ ಸಾಕ್ಷಿಯ ರಕ್ಷಣೆಗೆ ಗುರುವಾರ ಸಂಜೆ, ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಮೋದನೆ ನೀಡಿದೆ.
ಆದರೆ ಸಾಕ್ಷಿ ದೂರುದಾರರ ಗುರುತಿನ ರಕ್ಷಣೆಯ ವಿಚಾರದಲ್ಲಿ, ಸಾಕ್ಷಿ ದೂರುದಾರರನ್ನು ಪ್ರತಿನಿಧಿಸಿರುವ ವ್ಯಕ್ತಿಗಳು ಪತ್ರಿಕಾ ಪ್ರಕಟಣೆ ಹಾಗೂ ಎಫ್.ಐ.ಆರ್ ಪ್ರತಿಯನ್ನು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಮೂಲಕ, ಸಾಕ್ಷಿ ದೂರುದಾರರ ವಯಸ್ಸು, ವೃತ್ತಿಯ ಸ್ಥಳ, ಚಹರೆ, ವೃತ್ತಿಯಲ್ಲಿದ್ದ ಅವಧಿ, ಸಮುದಾಯ ಮತ್ತು ಇತರೆ ಮಾಹಿತಿಗಳನ್ನು ಬಹಿರಂಗಗೊಳಿಸಿರುವುದರಿಂದ, ಸ್ಥಳೀಯ ಅನೇಕರು ಸಾಕ್ಷಿ ದೂರುದಾರರನ್ನು ಅಂದಾಜಿಸಿರುತ್ತಾರೆ. ಆದಾಗ್ಯೂ ಎಲ್ಲಾ ಅಧಿಕೃತ ಮೂಲಗಳಿಂದ ಸಾಕ್ಷಿ ದೂರುದಾರರ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಲಾಗಿದೆ ಹಾಗೂ ಈ ಬಗ್ಗೆ ಬಂಟ್ವಾಳ ಡಿವೈಎಸ್ಪಿ ಅವರ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ.
ಈ ದಿನ ಸಾಕ್ಷಿ ದೂರುದಾರರು ಬೆಳ್ತಂಗಡಿಯ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿರುತ್ತಾರೆ. ಸಾಕ್ಷಿ ದೂರುದಾರರು ಸ್ವತಃ ತಾವೇ ಹೊರತೆಗೆದಿರುವುದಾಗಿ ತಿಳಿಸಿರುವ ಅಸ್ಥಿಪಂಜರದ ಅವಶೇಷಗಳನ್ನು ಹಾಜರುಪಡಿಸಿದ್ದು, ಅವುಗಳನ್ನು ಸಾಕ್ಷಿ ದೂರುದಾರರ ಪರ ವಕೀಲರು ಹಾಗೂ ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನ ಪಡೆದುಕೊಂಡಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
0 comments:
Post a Comment