ಬಂಟ್ವಾಳ, ಜುಲೈ 16, 2025 (ಕರಾವಳಿ ಟೈಮ್ಸ್) : ಮಾವಿನ ಹಣ್ಣಿನ ವ್ಯಾಪಾರಿಯೊಂದಿಗೆ ಕಡಿಮೆ ಬೆಲೆಗೆ ಹಣ್ಣು ನೀಡುವಂತೆ ತಗಾದೆ ತೆಗೆದು ಏಳೆಂಟು ಮಂದಿ ತಂಡ ಸಾರ್ವಜನಿಕವಾಗಿ ಗಲಾಟೆ ಮಾಡಿದ ಘಟನೆ ಸಂಗಬೆಟ್ಟು ಗ್ರಾಮದ ಕರ್ಪೆ ಎಂಬಲ್ಲಿನ ಸಂತೆ ವಠಾರದಲ್ಲಿ ಮಂಗಳವಾರ ಸಂಜೆ ವೇಳೆ ನಡೆದಿದೆ.
ಈ ಬಗ್ಗೆ ಗ್ರಾಮದ ಬೀಟ್ ಪೊಲೀಸ್ ಸಹದೇವ ಅವರು ನೀಡಿದ ದೂರಿನಂತೆ ಪ್ರಭಾಕರ ಪ್ರಭು, ಹರೀಶ ಹಾಗೂ ಇತರ ಐದಾರು ಮಂದಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಸಂಜೆ 7 ಗಂಟೆ ವೇಳೆಗೆ ಸಾರ್ವಜನಿಕ ಸ್ಥಳದಲ್ಲಿ ಗಲಾಟೆಯಾಗುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಜನ ಗುಂಪು ಸೇರಿದ್ದು ಕಂಡು ಬಂದಿದೆ. ಈ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದ್ದು, ಸಂಜೆ ಸುಮಾರು 7.20 ರ ವೇಳೆಗೆ ಸಂತೆ ವಠಾರದಲ್ಲಿ ಮಾವಿನ ಹಣ್ಣು ವ್ಯಾಪಾರ ಮಾಡಿಕೊಂಡಿದ್ದ ವ್ಯಾಪಾರಿಯಲ್ಲಿ ಹಣ್ಣು ಖರೀದಿಸಲು ಬಂದ ಪ್ರಭಾಕರ ಪ್ರಭು, ಹರೀಶ ಎಂಬವರು ಹಣ್ಣುಗಳನ್ನು ಕೊಂಡುಕೊಳ್ಳುವ ವಿಚಾರದಲ್ಲಿ ಕಡಿಮೆ ಬೆಲೆಗೆ ಮಾಡಿಕೊಡು ಎಂದು ಹಣ್ಣು ವ್ಯಾಪಾರಿಗೆ ಕೇಳಿರುತ್ತಾರೆ. ಆಗ ಹಣ್ಣು ವ್ಯಾಪಾರಿ ಫ್ರೀ ಆಗಿ ನಿಮಗೆ ನೀಡುತ್ತೇನೆ ಕೊಂಡು ಹೋಗಿ ಎಂದು ತಿಳಿಸಿರುತ್ತಾನೆ. ಆಗ ಏಕಾಏಕಿ ಕೊಪಗೊಂಡ ಪ್ರಭಾಕರ ಪ್ರಭು, ಹರೀಶ್ ಅವರುಗಳು ಇತರ 5-6 ಜನ ಬೆಂಬಲಿಗರೊಂದಿಗೆ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಹಣ್ಣಿನ ವ್ಯಾಪಾರಿ ಮತ್ತು ಆತನ ಜೊತೆಗಿದ್ದ ಅಶ್ಫಕ್ ಎಂಬವರೊಂದಿಗೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆಸಿರುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ, ಗಲಾಟೆ ಮಾಡಿಕೊಂಡು ಸಾರ್ವಜನಿಕರಿಗೆ ಭಯ ಉಂಟು ಮಾಡಿ ನೆಮ್ಮದಿಗೆ ಭಂಗ ಉಂಟುಮಾಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2025 ಕಲಂ 189(2), 191(2) ಜೊತೆಗೆ 190 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment