ಮಂಗಳೂರು, ಜುಲೈ 15, 2025 (ಕರಾವಳಿ ಟೈಮ್ಸ್) : ಉದ್ಯಮಿಯೊಬ್ಬರ ವಿರುದ್ದ ವಾಟ್ಸಪ್ ಗುಂಪುಗಳಲ್ಲಿ ಕೋಮು ಆಧಾರಿತ ಸುಳ್ಳು ಆರೋಪಗಳ ಪ್ರಚಾರ ಮಾಡಿದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕುಳಾಯಿ ಗ್ರಾಮದ ವನದುರ್ಗಾ ಕೆಕೆ ಶೆಟ್ಟಿ ಕಂಪೌಂಡ್ ನಿವಾಸಿ ದಿವಂಗತ ಸಂಜೀವ ಆಚಾರಿ ಅವರ ಮಗ ರಾಮ್ ಪ್ರಸಾದ್ ಅಲಿಯಾಸ್ ಪೊಚ (42) ಎಂದು ಹೆಸರಿಸಲಾಗಿದೆ.
ಕುಳಾಯಿ-ಹೊನ್ನಕಟ್ಟೆ ನಿವಾಸಿ, ಸುರತ್ಕಲ್-ಹೊಸಬೆಟ್ಟುವಿನಲ್ಲಿ ಆರ್ ವಿ ಎಂಟರ್ ಪ್ರೈಸ್ ಎಂಬ ಸಂಸ್ಥೆ ನಡೆಸುತ್ತಿರುವ ರಾಜೇಶ್ ಎಂಬವರ ವಿರುದ್ದ ದುಷ್ಕರ್ಮಿಗಳು ಹಿಂದೂ ಜನರಲ್ಲಿ ಕೋಮು ದ್ವೇಷ ಹರಡಿಸುವ ಪ್ರಯತ್ನಪಟ್ಟಿದ್ದು, ರಾಜೇಶ್ ಅವರು ಸುಮಾರು 20ಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡಿರುತ್ತಾರೆ ಅಲ್ಲದೇ ಬ್ಲೂ ಫಿಲಂ ಸಿಡಿ ಮಾರಾಟ ಮಾಡಿ ಸಿಕ್ಕಿಹಾಕಿಕೊಂಡಿರುತ್ತಾರೆ. ಅವರ ಕಚೇರಿಯಲ್ಲಿರುವ ಯುವತಿಯರನ್ನು ಮತಾಂತರ ಮಾಡಿರುತ್ತಾರೆ ಹಾಗೂ 24 ವರ್ಷ ಪ್ರಾಯದ ಹಿಂದೂ ಯುವತಿಯನ್ನು ರಾಜೇಶ್ ತನ್ನ ತಮ್ಮನಿಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದಾರೆ. ಆ ಹಿಂದೂ ಯುವತಿ ಹಣೆಗೆ ಕುಂಕುಮ ಹಾಕುವುದನ್ನು, ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿದ್ದಾಳೆ. ಬದಲಿಗೆ ಚರ್ಚ್ ಪ್ರಾರ್ಥನೆಗೆ ತಪ್ಪದೇ ಹಾಜರಾಗುತ್ತಿರುತ್ತಾಳೆ ಎಂದು ರಾಜೇಶ್ ಬಗ್ಗೆ ಇಲ್ಲಸಲ್ಲದ ಸುಳ್ಳು ಆರೋಪವನ್ನು ಮಾಡಿ ಕೋಮು ದ್ವೇಷ ಆಧಾರಿತ ಸಂದೇಶಗಳನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿಬಿಡಲಾಗಿತ್ತು. ಈ ಬಗ್ಗೆ ರಾಜೇಶ್ ನೀಡಿದ ದೂರಿನಂತೆ ಸುರತ್ಕಲ್ ಪೆÇಲೀಸ್ ಠಾಣೆಯಲ್ಲಿ ಜುಲೈ 13 ರಂದು ಠಾಣಾ ಅಪರಾಧ ಕ್ರಮಾಂಕ 93/2025 ಕಲಂ 352, 353(1), 353(2) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿತ್ತು.
ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಅವರ ನೇತೃತ್ವದಲ್ಲಿ ತನಿಖಾಧಿಕಾರಿ ಸುರತ್ಕಲ್ ಪೊಲೀಸ್ ಠಾಣಾ ಪಿಎಸ್ಸೈ ರಘು ನಾಯ್ಕ್ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡು ಪೊಲೀಸ್ ಸಿಬ್ಬಂದಿ ಅಣ್ಣಪ್ಪ ವಂಡ್ಸೆ ಅವರೊಂದಿಗೆ ತೆರಳಿ ಆರೋಪಿ ಕುಳಾಯಿ ಗ್ರಾಮದ ವನದುರ್ಗಾ ಕೆಕೆ ಶೆಟ್ಟಿ ಕಂಪೌಂಡ್ ನಿವಾಸಿ ದಿವಂಗತ ಸಂಜೀವ ಆಚಾರಿ ಅವರ ಮಗ ರಾಮ್ ಪ್ರಸಾದ್ ಅಲಿಯಾಸ್ ಪೊಚ (42) ಎಂಬಾತನನ್ನು ಸೋಮವಾರ ದಸ್ತಗಿರಿ ಮಾಡಿ ಕೂಲಂಕಷ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪೊಪ್ಪಿಕೊಂಡ ಮೇರೆಗೆ ಆತನನ್ನು ದಸ್ತಗಿರಿ ಮಾಡಿ ಮಂಗಳೂರು 2ನೇ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದ ಇನ್ನೋರ್ವ ಆರೋಪಿ ಲೋಕೇಶ್ ಕೋಡಿಕೆರೆ ಎಂಬಾತ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 81/2025 ರಲ್ಲಿ ದಸ್ತಗಿರಿಯಾಗಿ ಪ್ರಸ್ತುತ ಉಡುಪಿ ಜಿಲ್ಲಾ ಹಿರಿಯಡ್ಕ ಕಾರಾಗೃಹದಲ್ಲಿದ್ದು ಆತನನ್ನು ಬಾಡಿ ವಾರೆಂಟ್ ಮುಖಾಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
0 comments:
Post a Comment