ಮಂಗಳೂರು, ಜುಲೈ 31, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲಿಸ್ ಠಾಣೆಯಲ್ಲಿ ಪ್ರತ್ಯೇಕ 2 ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎಲ್ ಪಿ ಸಿ (ದೀರ್ಘಾವಧಿಯಲ್ಲಿ ತಲೆಮರೆಸಿಕೊಂಡು ಬಾಕಿ ಇದ್ದ ಪ್ರಕರಣ) ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ದ 2011ನೇ ಸಾಲಿನಲ್ಲಿ ದಾಖಲಾದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 4ನೇ ಆರೋಪಿಗೆ ನ್ಯಾಯಾಲಯವು ಎಲ್.ಪಿ.ಸಿ ವಾರಂಟು ಹೊರಡಿಸಿದ್ದು, ಸುಮಾರು 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪಿ ದಾಮೋದರ ಹಾಗೂ 2018ನೇ ಸಾಲಿನಲ್ಲಿ ದಾಖಲಾದ ಪ್ರಕರಣದಲ್ಲಿ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಉಬೇದುಲ್ಲಾ ಎಂಬಾತನನ್ನು ಕಣ್ಣೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
1ನೇ ಪ್ರಕರಣದಲ್ಲಿ 2011 ಮಾರ್ಚ್ 14 ರಂದು ಮಂಗಳೂರು ನಗರದ ಹಂಪನಕಟ್ಟೆಯಲ್ಲಿರುವ ಧನ್ಯವಾದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸಿಕೊಂಡಿರುವ ಬಗ್ಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡದ್ದನ್ನು ಪತ್ತೆ ಹಚ್ಚಿದ್ದು, ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 04/2011 ಕಲಂ 3(2)(ಎ) 5(ಡಿ), 2, 7 ಐ.ಟಿ.ಪಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ತನಿಖಾಧಿಕಾರಿ ತನಿಖೆ ನಡೆಸಿ ಪ್ರಕರಣದಲ್ಲಿ 4 ಜನ ಆರೋಪಿತರ ವಿರುದ್ದ ದೋಷರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಪ್ರಕರಣವು ವಿಚಾರಣೆಯಾಗಿ ಪ್ರಕರಣದ 1 ರಿಂದ 3ನೇ ಆರೋಪಿತರು ಪ್ರಕರಣದಿಂದ ಖುಲಾಸೆಗೊಂಡಿರುತ್ತಾರೆ.
ಆದರೆ ಪ್ರಕರಣ 4ನೇ ಆರೋಪಿಯಾದ ಪಿ. ದಾಮೋದರ್ ಎಂಬಾತನು ತಲೆಮರೆಸಿಕೊಂಡಿರುವುದರಿಂದ ನ್ಯಾಯಾಲಯವು ಈತನ ವಿರುದ್ದ ಎಲ್.ಪಿ.ಸಿ ವಾರಂಟು ಹೊರಡಿಸಿರುತ್ತದೆ. ನಗರದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಇರುವ ವಾರಂಟು ಅಸಾಮಿಗಳು ಹಾಗೂ ಎಲ್.ಪಿ.ಸಿ ವಾರಂಟು ಅಸಾಮಿಗಳ ಪತ್ತೆಯ ಬಗ್ಗೆ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಮಹಿಳಾ ಪೆÇಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಬಾಲಕೃಷ್ಣ, ಪಿ.ಐ ಮತ್ತು ಸಿಬ್ಬಂದಿಗಳು ಸುಮಾರು 14 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ ಮಂಗಳೂರು ಹೊಯಿಗೆ ಬಜಾರ್ ನಿವಾಸಿ ಪಿ ದಾಮೋದರ (40) ಎಂಬಾತನನ್ನು, ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
2ನೇ ಪ್ರಕರಣದಲ್ಲಿ 2018ನೇ ಸಾಲಿನಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ವರದಕ್ಷಿಣಿ ಕಿರುಕುಳ ಪ್ರಕರಣದಲ್ಲಿ ಆರೋಪಿತ ಉಬೇದುಲ್ಲಾ ಎಂಬಾತನು ತನ್ನ ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಕಿರುಕುಳ ನೀಡಿ, ಮದುವೆಯ ಸಮಯಲ್ಲಿ ನೀಡಿದ ಚಿನ್ನಭಾರಣಗಳನ್ನು ತೆಗೆದುಕೊಂಡು ಹೋಗಿ ಮಾರಿ ನಂತರ ವಿದೇಶಕ್ಕೆ ಹೋಗಿ ಯಾವುದೇ ಪೊನ್ ಕರೆ ಮಾಡದೆ ಇದ್ದು, ಅಲ್ಲದೆ ಪೊನ್ ಕರೆಗೂ ಸ್ಪಂದಿಸದೆ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ಮಾಡಿರುವ ಬಗ್ಗೆ 2018 ರ ನವೆಂಬರ್ 3 ರಂದು ಮಹಿಳಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 54/2018 ಕಲಂ 498(ಎ), 504 ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿ ಕಂಕನಾಡಿ ಲಿಟಲ್ ಫ್ಲವರ್ ಅಪಾರ್ಟ್‍ಮೆಂಟ್ ನಿವಾಸಿ ಉಬೇದುಲ್ಲಾ (39) ಎಂಬಾತನ ವಿರುದ್ದ ನ್ಯಾಯಾಲಯಕ್ಕೆ ತಲೆಮರೆಸಿಕೊಂಡಿರುವ ಆರೋಪಿತ ಎಂಬುದಾಗಿ ದೋಷಾರೋಪಣಾ ಪತ್ರ ಸಲ್ಲಿಸಿದ್ದು, ಆರೋಪಿತನ ವಿರುದ್ದ ಎಲ್.ಪಿ.ಸಿ ವಾರಂಟನ್ನು ಹೊರಡಿಸಲಾಗಿತ್ತು. ಆರೋಪಿ ಸುಮಾರು 7 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಆರೋಪಿಯನ್ನು 2025 ಜುಲೈ 29ರಂದು ಕೇರಳ ರಾಜ್ಯದ ಕಣ್ಣೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬರುತ್ತಿರುವುದಾಗಿ ಮಾಹಿತಿ ದೊರೆತಂತೆ ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
0 comments:
Post a Comment