ಬಂಟ್ವಾಳ, ಜುಲೈ 31, 2025 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ನಡೆದಿದ್ದ ಒಣ ಅಡಿಕೆ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಸೊತ್ತುಗಳ ಸಹಿತ ಓರ್ವ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಯನ್ನು ಸುಳ್ಯು ತಾಲೂಕಿನ ಪೈಚಾರು ನಿವಾಸಿ ಸತೀಶ್ (29) ಎಂದು ಹೆಸರಿಸಲಾಗಿದೆ.
ಮಣಿನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ಜುಲೈ 3 ರಿಂದ 22 ರ ಅವಧಿಯಲ್ಲಿ ಸುಮಾರು 45 ಪ್ಲಾಸ್ಟಿಕ್ ಚೀಲದಲ್ಲಿದ್ದ 2.20 ಲಕ್ಷ ರೂಪಾಯಿ ಮೌಲ್ಯದ ಒಣ ಅಡಿಕೆ ಕಳವಾಗಿರುವ ಬಗ್ಗೆ ಜುಲೈ 23 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ರಿ ಕಳವು ಪ್ರಕರಣ ಪತ್ತೆ ಕಾರ್ಯಕ್ಕಾಗಿ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಪೆÇಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ ಬಿ ಅವರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜುಲೈ 28 ರಂದು ಆರೋಪಿ ಸತೀಶ್ ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯಿಂದ ಕಳವುಗೈದ 74 ಸಾವಿರ ರೂಪಾಯಿ ಮೌಲ್ಯದ 15 ಚೀಲ ಒಣ ಅಡಿಕೆ, ಕಳವುಗೈದ ಅಡಿಕೆಯನ್ನು ಮಾರಾಟ ಮಾಡಿದ 70 ಸಾವಿರ ರೂಪಾಯಿ ನಗದು ಹಣ, ಕೃತ್ಯಕ್ಕೆ ಬಳಸಿದ 80 ಸಾವಿರ ರೂಪಾಯಿ ಮೌಲ್ಯದ ಆಪೆ ಗೂಡ್ಸ್ ವಾಹನ ಸಹಿತ ಒಟ್ಟು 2.24 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧನ ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈ ಮಂಜುನಾಥ್ ಟಿ, ಎಎಸ್ಸೈ ಜಿನ್ನಪ್ಪ ಗೌಡ, ಎಚ್ ಸಿಗಳಾದ ರಾಜೇಶ್, ನಝೀರ್, ಲೋಕೇಶ್, ಪ್ರಶಾಂತ, ಪಿಸಿಗಳಾದ ಮಾರುತಿ, ಹನುಮಂತ ಅವರುಗಳು ಪಾಲ್ಗೊಂಡಿದ್ದರು.
0 comments:
Post a Comment