ಬಂಟ್ವಾಳ, ಜುಲೈ 21, 2025 (ಕರಾವಳಿ ಟೈಮ್ಸ್) : ಅಮಲು ಪದಾರ್ಥ ಸೇವೆನೆ ಬಿಟ್ಟಿದ್ದರಿಂದ ಮಾನಸಿಕವಾಗಿ ನೊಂದುಕೊಂಡ ವ್ಯಕ್ತಿಯೋರ್ವರು ವಿಷ ಪದಾರ್ಥ ಸೇವಿಸಿ ಮೃತಪಟ್ಟ ಘಟನೆ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ಜುಲೈ 19 ರಂದು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಶೇಖರ (52) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಪುತ್ರ ದೇವಿಪ್ರಸಾದ್ ಅವರು ಪೊಲೀಸರಿಗೆ ದೂರು ನೀಡಿದ್ದು, ತಂದೆ ಶೇಖರ ಅವರು ವಿಪರೀತ ಅಮಲು ಪದಾರ್ಥ ಸೇವಿಸಿಕೊಂಡಿದ್ದವರು, ಸುಮಾರು ಒಂದು ತಿಂಗಳ ಹಿಂದೆ ಏಕಾಏಕಿ ಅಮಲು ಪದಾರ್ಥ ಸೇವಿಸಿರುವುದನ್ನು ಬಿಟ್ಟಿದ್ದರು. ಅಮಲು ಪದಾರ್ಥ ಬಿಟ್ಟ ಮೇಲೆ ಯಾರೊಂದಿಗೂ ಸರಿಯಾಗಿ ಬೆರೆಯದೇ, ಅವರಷ್ಟಕ್ಕೆ ಇದ್ದವರು, ಮಾನಸಿಕವಾಗಿ ನೊಂದು, ವಿಪರೀತ ಒತ್ತಡ ಅನುಭವಿಸುತ್ತಿದ್ದರು.
ಜುಲೈ 19 ರಂದು ಸಂಜೆ 5 ಗಂಟೆಗೆ ಮನೆಯ ಪಕ್ಕದ ಕೊಟ್ಯಾದ ಒಳಗಡೆ, ಕೃಷಿ ತೋಟಕ್ಕೆ ಮದ್ದು ಬಿಡಲು ಮೈಲುತುತ್ತು ವಿಷ ಔಷಧಿಯನ್ನು ನೀರಿನ ಬಕೆಟಿನಲ್ಲಿ ಮಿಶ್ರಣ ಮಾಡಿ ಇಟ್ಟಿರುವ ಕೃಷಿಗೆ ಬಳಸುವ ಮೈಲುತುತ್ತು ಔಷಧಿಯನ್ನು ಸೇವಿಸಿ ಅಲ್ಲಿಯೇ ಬಿದ್ದು ಹೊರಳಾಡುತ್ತಿದ್ದರು. ತಕ್ಷಣ ಇವರನ್ನು ತಾಯಿ, ದೊಡ್ಡಪ್ಪ ಚಂದ್ರ ಗೌಡ ಅವರುಗಳು ಉಪಚರಿಸಿ, ಚಿಕಿತ್ಸೆ ಬಗ್ಗೆ ವಿಟ್ಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಚಿಕಿತ್ಸೆಯಲ್ಲಿದ್ದ ಶೇಖರ ಅವರು ಚಿಕಿತ್ಸೆ ಫಲಾಕಾರಿಯಾಗದೇ ರಾತ್ರಿ ವೇಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಅರ್ ಪ್ರಕರಣ ದಾಖಲಾಗಿದೆ.
0 comments:
Post a Comment