ಬೆಂಗಳೂರು, ಜುಲೈ 12, 2025 (ಕರಾವಳಿ ಟೈಮ್ಸ್) : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್ ಸೈಟ್ ಕಳೆದ ಕೆಲ ದಿನಗಳಿಂದ ಸರ್ವರ್ ಡೌನ್ ಆಗಿ ತೀವ್ರ ಸಮಸ್ಯೆ ಉಂಟಾಗಿದ್ದು, ರಾಜ್ಯಾದ್ಯಂತ ಯುಜಿಸಿಇಟಿ ವಿದ್ಯಾರ್ಥಿಗಳು ತಮ್ಮ ಸೀಟ್ ಆಯ್ಕೆ ನಮೂದಿಸಲು ದಿನವಿಡೀ ಪರದಾಟ ನಡೆಸುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ವರ್ ಸಮಸ್ಯೆಯನ್ನು ಒಪ್ಪಿಕೊಂಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯುಜಿಸಿಇಟಿ ಸೀಟು ಆಯ್ಕೆ ನಮೂದು ಪ್ರಕ್ರಿಯೆಯ ಕೊನೆ ದಿನಾಂಕವನ್ನು ಜುಲೈ 15 ರಿಂದ ಜುಲೈ 18 ರವರೆಗೆ ವಿಸ್ತರಿಸಿ ಸುತ್ತೋಲೆ ಹೊರಡಿಸಿದೆ.
ಈ ಬಾರಿ ಸಿಇಟಿ ವಿದ್ಯಾರ್ಥಿಗಳ ಸೀಟು ಹಂಚಿಕೆ ಪ್ರಕ್ರಿಯೆ ಬಾರೀ ನಿಧಾನವಾಗಿ ನಡೆಯುತ್ತಿದ್ದು, ಜುಲೈ 8 ರ ಬಳಿಕವಷ್ಟೆ ಯುಜಿಸಿಇಟಿ ಸೀಟು ಆಯ್ಕೆ ನಮೂದಿಗಾಗಿ ಕೆಇಎ ವೆಬ್ ಸೈಟಿನಲ್ಲಿ ಲಿಂಕ್ ತೆರೆದು ಅಧಿಸೂಚನೆ ಹೊರಡಿಸಲಾಗಿತ್ತು. ಅಂದಿನಿಂದ ಈ ದಿನದವರೆಗೂ ವಿದ್ಯಾರ್ಥಿಗಳು ನಿರಂತರವಾಗಿ ಆಯ್ಕೆ ನಮೂದಿಗಾಗಿ ಕಂಪ್ಯೂಟ್, ಲ್ಯಾಪ್ ಟಾಪ್, ಸೈಬರ್ ಸೆಂಟರ್ ಗಳ ಮುಂದೆ ದಿನವಿಡೀ ಪರದಾಟ ನಡೆಸುತ್ತಿದ್ದಾರೆ. ಹಗಲೂ-ರಾತ್ರಿ ಸಮಯದಲ್ಲೂ ವಿದ್ಯಾರ್ಥಿಗಳು ನಿರಂತರವಾಗಿ ತಮ್ಮ ಪ್ರಯತ್ನವನ್ನು ಚಾಲ್ತಿಯಲ್ಲಿಟ್ಟರೂ ಆಯ್ಕೆ ನಮೂದು ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. ಅಷ್ಟರ ಪ್ರಮಾಣದಲ್ಲಿ ಸರ್ವರ್ ಕ್ರ್ಯಾಶ್ ಆಗುತ್ತಿದೆ. ಕೆಇಎ ವೆಬ್ ಸೈಟ್ ಮೂಲಕ ಆಗೊಮ್ಮೆ ಈಗೊಮ್ಮೆ ಸರ್ವರ್ ನಿರ್ವಹಣೆಯಲ್ಲಿದೆ ಎಂಬ ಸೂಚನೆ ನೀಡುತ್ತಿದೆಯಾದರೂ ನೀಡಿದ ಸಮಯದ ಬಳಿಕವೂ ಸರ್ವರ್ ವೇಗ ಪಡೆದುಕೊಳ್ಳುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ನಿರಂತರವಾಗಿ ಕಿರಿ ಕಿರಿ ಅನುಭವಿಸುವಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಕೆಲ ವಿದ್ಯಾರ್ಥಿಗಳು ಈ ಪ್ರಕ್ರಿಯೆಗಾಗಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಸೈಬರ್ ಕೇಂದ್ರಗಳಲ್ಲಿ, ಕಂಪ್ಯೂಟರ್ ಮುಂಭಾಗದಲ್ಲಿ ಕುಳಿತುಕೊಂಡ ಬಗ್ಗೆಯೂ ಆರೋಪಿಸುತ್ತಿದ್ದಾರೆ. ಕೆಇಎ ಶುಕ್ರವಾರ ಮಧ್ಯಾಹ್ನ 2 ಗಂಟೆ ನಂತರ ಪ್ರಯತ್ನಿಸಿ ಸರ್ವರ್ ನಿರ್ವಹಣೆಯಲ್ಲಿದೆ ಎಂಬ ಸೂಚನೆ ನೀಡಿತ್ತು. 2 ಗಂಟೆಯ ನಂತರ ಮತ್ತೊಮ್ಮೆ ಸಂಜೆ 6 ಗಂಟೆ ನಂತರ ಪ್ರಯತ್ನಿಸಿ ಎಂಬ ಸೂಚನೆ ನೀಡಲಾಗಿತ್ತು. ಆದರೂ ಅದರ ಬಳಿಕ ಈ ದಿನದ ಈ ಸಮಯದವರೆಗೂ ಸರ್ವರ್ ಸಮಸ್ಯೆ ಪರಿಹಾರವಾಗಿಲ್ಲ ಎನ್ನುತ್ತಾರೆ ಸಿಇಟಿ ಆಕಾಂಕ್ಷಿ ವಿದ್ಯಾರ್ಥಿಗಳು.
ಅಲ್ಲದೆ ಸಿಇಟಿ-ನೀಟ್ ಆಕಾಂಕ್ಷಿಗಳಿಗೆ ಕೆಇಎ ತನ್ನ ವೆಬ್ ಸೈಟಿನಲ್ಲಿ ಕಾಲಕಾಲಕ್ಕೆ ಸೂಚನೆ ನೀಡುತ್ತಿದೆಯೇ ಹೊರತು ಸಮಸ್ಯೆಗಳ ಬಗ್ಗೆಯಾಗಲೀ, ಸೂಚನೆಗಳ ಬಗ್ಗೆಯಾಗಲೀ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ನೇರ ಸಂದೇಶ ನೀಡುವುದೇ ಇಲ್ಲ. ಅರ್ಜಿ ತುಂಬಿಸುವ ಸಂದರ್ಭ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ ಸಹಿತ ತುರ್ತು ಉದ್ದೇಶಕ್ಕಾಗಿ ಇತರ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿಗಳನ್ನೂ ಕೇಳುತ್ತಿದ್ದರೂ ಇದ್ಯಾವುದಕ್ಕೂ ಸಂದೇಶ ತಲುಪಿಸುವ ಜವಾಬ್ದಾರಿಯನ್ನು ಕೆಇಎ ವಹಿಸುತ್ತಲೇ ಇಲ್ಲ ಮಾತ್ರವಲ್ಲ ಕೆಇಎ ಹೆಲ್ಪ್ ಲೈನ್ ಸಂಖ್ಯೆಗಳು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದೆ. ನಿರಂತರ ಕರೆ ಮಾಡಿದರೂ ಈ ಬಗ್ಗೆ ಕನಿಷ್ಠ ಪ್ರತಿಕ್ರಯಿಸುವ ತಾಳ್ಮೆಯೂ ಸಹಾಯವಾಣಿ ನಿರ್ವಾಹಕರಲ್ಲಿರುವುದಿಲ್ಲ. ಒಂದು ವೇಳೆ ಕರೆ ಸ್ವೀಕರಿಸಿದರೂ ತಕ್ಷಣ ಕರೆ ಕಟ್ ಮಾಡುವುದಲ್ಲದೆ ಮತ್ತೆ ಕರೆ ಮಾಡಿದಾಗ ಕರೆ ಸ್ವೀಕರಿಸುವ ನಿರ್ವಾಹಕರೆ ಬೇರೆಯಾಗಿದ್ದು, ಸಮಸ್ಯೆಗೆ ಸೂಕ್ತ ಪರಿಹಾರವೂ ದೊರೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೂ ಅಲ್ಲದೆ ಇತ್ತೀಚೆಗೆ ಸಿಇಟಿ ಅರ್ಜಿಗಳಲ್ಲಿನ ತಪ್ಪಿಗಾಗಿ ತಿದ್ದುಪಡಿ ಲಿಂಕ್ ಓಪನ್ ಮಾಡಿದಾಗಲೂ ಸಮಸ್ಯೆ ಧಾರಾಳವಾಗಿತ್ತು. ತಿದ್ದುಪಡಿ ಮಾಡಿದ ಕ್ಲೇಮ್ ಗಳನ್ನು ಪರಿಶೀಲನೆ ನಡೆಸಲು ಸಮೀಪದ ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ ಪರಿಶೀಲನೆಗೆ ಕೊನೆ ದಿನಾಂಕ ನಿಗದಿಪಡಿಸಿದ ದಿನದಂದು ಕೆಲವೊಂದು ಜಿಲ್ಲೆಗಳಲ್ಲಿ ಮಳೆ ಕಾರಣಕ್ಕಾಗಿ ಪಿಯುಸಿವರೆಗೂ ರಜೆ ಘೋಷಿಸಿದ್ದರಿಂದ ಸಂಬಂಧಪಟ್ಟ ಕಾಲೇಜುಗಳು ಪೂರ್ಣವಾಗಿ ಬಂದ್ ಆಗಿದ್ದ ಕಾರಣ ಅಲ್ಲಿಯೂ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಿದ್ದು, ದಾಖಲೆ ಪರಿಶೀಲನೆಗಾಗಿ ಇನ್ನೊಂದು ಜಿಲ್ಲೆ ಅಥವಾ ತಾಲೂಕು ಕೇಂದ್ರಗಳ ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ದೌಡಾಯಿಸುವ ಅನಿವಾರ್ಯತೆ ಎದುರಾಗಿತ್ತು ಎಂಬ ಆರೋಪಗಳೂ ಕೇಳಿ ಬಂದಿದೆ.
ವಿದ್ಯಾರ್ಥಿಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೆಇಎ ನಿರ್ದೇಶಕಿ ಎಚ್ ಪ್ರಸನ್ನ, ಡೇಟಾ ಸೆಂಟರ್ ನಲ್ಲಿನ ಸಮಸ್ಯೆಯಿಂದಾಗಿ ಆಯ್ಕೆ ನಮೂದು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಪೆÇೀಷಕರು ಅಥವಾ ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ. ನಾವು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಮತ್ತು ಕಟ್-ಆಫ್ ದಿನಾಂಕವನ್ನು ವಿಸ್ತರಿಸುತ್ತೇವೆ. ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆ ನಮೂದನ್ನು ಪೂರ್ಣಗೊಳಿಸಲು ಸಾಕಷ್ಟು ಅವಕಾಶವನ್ನು ನೀಡಲಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಈ ವ್ಯವಸ್ಥೆಯು ಮತ್ತೆ ಆನ್‍ಲೈನ್‍ಗೆ ಬಂದ ನಂತರ, ನಾವು ಎಲ್ಲಾ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕವೂ ಸಂದೇಶಗಳನ್ನು ಕಳಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.
ಪೆÇೀರ್ಟಲ್ ಪ್ರವೇಶಿಸಲು ಸಾಧ್ಯವಾದ ನಂತರ ಅವರು ತಮ್ಮ ಆದ್ಯತೆಗಳನ್ನು ನಮೂದಿಸಲು ಸಿದ್ಧರಾಗುವಂತೆ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆಯಾಗುವ ಹೊತ್ತಿಗೆ ಆದ್ಯತೆಯ ಪಟ್ಟಿಯನ್ನು ಸಿದ್ಧಪಡಿಸುವಂತೆ ಪ್ರಸನ್ನ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
0 comments:
Post a Comment