ಬಂಟ್ವಾಳ, ಜುಲೈ 31, 2025 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖಾ ಪಿಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸಿ ನಿವಾಸಿ, ಖೀರಪ್ಪ ಘಟಕಾಂಬಳೆ ಅವರ ಬಗ್ಗೆ ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು ಹಾಕಿ ಅವರ ಆತ್ಮಹತ್ಯೆ ಹಾಗೂ ಧರ್ಮಸ್ಥಳ ಪ್ರಕರಣಕ್ಕೂ ತಳುಕು ಹಾಕಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ವೈರಲ್ ಮಾಡಿರುವ ಬಗ್ಗೆ ಅವರ ಪುತ್ರಿ ಕ್ಷಮಾ ಅವರು ಶಿರಸಿ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
ತಂದೆಯವರು ಇತ್ತೀಚೆಗೆ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಜುಲೈ 28 ರಂದು ಕ್ಷಮಾ ಅವರು ತನ್ನ ಮೊಬೈಲಿನಲ್ಲಿ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸಿಸುತ್ತಿದ್ದಾಗ, ನಾಲ್ಕು ಇನ್ಟಾಗ್ರಾಂ ಖಾತೆಗಳಲ್ಲಿ ತಂದೆಯ ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು ಹಾಕಿ, ಅವರ ಆತ್ಮಹತ್ಯೆಗೆ ಹಾಗೂ ಧರ್ಮಸ್ಥಳದಲ್ಲಿ ಎಸ್ ಐ ಟಿ ತಂಡದಿಂದ ನಡೆಯುತ್ತಿರುವ ಪ್ರಕರಣವೊಂದರ ತನಿಖೆಗೂ ಸಂಬಂಧ ಕಲ್ಪಿಸುವಂತಹ ಮಾನ ಹಾನಿಕರ ಪೋಸ್ಟ್ ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ. ತಂದೆಯ ಬಗ್ಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿ ಶಾಂತಿ ಭಂಗ ಮಾಡುತ್ತಿರುವ, ಸಾರ್ವಜನಿಕರಿಗೆ ಭೀತಿಯನ್ನು ಹುಟ್ಟಿಸುವಂತಹ ಪೋಸ್ಟ್ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಅವರು ನೀಡಿದ ದೂರಿನಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕಲಂ 352, 353(1) (2) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment