ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದಲ್ಲಿ ಗಣಿ ಗುತ್ತಿಗೆ ಪರವಾನಿಗೆ ಮಂಜೂರಾತಿ ಪಡೆದ ಸ್ಥಳ ಮೀರಿ ಒತ್ತುವರಿ ಮಾಡಿ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸಿದ ವ್ಯಕ್ತಿಯ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಂದೀಪ್ ಜಿ ಯು ಅವರಿಗೆ ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಕುವಡ್ಕ ನಿವಾಸಿ ಜೋಸೆಫ್ ಡಿಕುನ್ಹ ಅವರಿಗೆ ಬಿ ಮೂಡ ಗ್ರಾಮದ ಸರ್ವೆ ನಂಬ್ರ 82/1ರಲ್ಲಿ 1.50 ಎಕ್ರೆಗೆ ಕಟ್ಟಡ ಕಲ್ಲು ಗಣಿ ಗುತ್ತಿಗೆ ನಡೆಸಲು ಪರಾನಿಗೆ ಸಂಖ್ಯೆ ಡಿ ಎಸ್ ಕೆ ಎನ್ 82 ರಂತೆ ದಿನಾಂಕ 01-04-2008 ರಿಂದ ಅನ್ವಯವಾಗುವಂತೆ 20 ವರ್ಷಗಳ ಅವಧಿಗೆ ಪರವಾನಿಗೆ ಮಂಜೂರು ಮಾಡಲಾಗಿತ್ತು. ಸದ್ರಿ ಪ್ರದೇಶಕ್ಕೆ ಸಂಬಂಧಿಸಿದಂತೆ ದೂರು ಅರ್ಜಿ ಸ್ವೀಕೃತವಾಗಿರುವ ಕುರಿತು ಸದರಿ ಕಲ್ಲು ಗಣಿ ಗುತ್ತಿಗೆ ಪ್ರದೇಶವನ್ನು ಜೂನ್ 24 ರಂದು ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿ, ತಾಲೂಕು ಮೋಜಣಿದಾರರು, ಬಂಟ್ವಾಳ ನಗರ ಪೆÇಲೀಸ್ ವೃತ್ತ ನಿರೀಕ್ಷಕರು ಹಾಗೂ ಉಪನಿರೀಕ್ಷಕರು, ಗಣಿ ಇಲಾಖಾ ಕಚೇರಿಯ ಕಿರಿಯ ಅಭಿಯಂತರರು ಹಾಗೂ ಗುತ್ತಿಗೆದಾರರ ಪ್ರತಿನಿಧಿಯಾಗಿ ಮರ್ವಿನ್ ಗೋವಿಯಸ್ ಅವರುಗಳ ಸಮ್ಮುಖದಲ್ಲಿ ಜಂಟಿ ಸ್ಥಳ ಪರಿಶೀಲನೆ ಹಾಗೂ ಜಂಟಿ ಮೋಜಣಿ ಕಾರ್ಯವನ್ನು ನಡೆಸಲಾಗಿದ್ದು, ಸ್ಥಳ ಸಮೀಕ್ಷೆಯಂತೆ ಮಂಜೂರಾದ ಸ ನಂ 82/1ರ 1.50 ಎಕ್ರೆ ಪ್ರದೇಶದ ಪಶ್ಚಿಮದಲ್ಲಿ ಒತ್ತುವರಿಯಾಗಿ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸಿರುವುದು ಕಂಡು ಬಂದಿದೆ. ಸದ್ರಿ ಗಣಿಗಾರಿಕೆ ಪ್ರದೇಶದಲ್ಲಿ ಕ್ವಾರಿ ಪಿಟ್ ಅನ್ನು ಪರಿಶೀಲಿಸಲಾಗಿ ಸುಮಾರು ಸರಾಸರಿ 10 ಮೀಟರುಗಳಷ್ಟು ಓವರ್ ಲೋಡ್ ಮಣ್ಣಿನ ಕ್ಯಾಪ್ ಇದ್ದು ಸುಮಾರು 32 ಮೀಟರಿನಷ್ಟು ಆಳದವರೆಗೆ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸಿರುವುದು ಸ್ಥಳ ಮಹಜರು ವೇಳೆ ಕಂಡು ಬಂದಿದೆ. ಅಲ್ಲದೆ ಸದ್ರಿ ಕ್ವಾರಿ ಗುಂಡಿಯ ಸುತ್ತಲೂ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಗುತ್ತಿಗೆ ಕರಾರಿನಲ್ಲಿ ನೀಡಿರುವ ಷರತ್ತು ಮತ್ತು ನಿಬಂಧನೆಗಳಂತೆ ಸುರಕ್ಷತೆಗಾಗಿ ತಂತಿ ಬೇಲಿಯನ್ನು ನಿರ್ಮಿಸಿಲ್ಲದಿರುವುದು ಕಂಡು ಬಂದಿರುತ್ತದೆ. ಅನುಮತಿ ಪಡೆದ ಸ್ಥಳದಲ್ಲಿ ಹೊರತುಪಡಿಸಿ ಇತರೆ ಜಾಗದಲ್ಲಿ ಅತಿಕ್ರಮಿಸಿ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸಿರುತ್ತಾರೆ ಎಂದು ವರದಿ ನೀಡಿರುವ ಹಿನ್ನಲೆಯಲ್ಲಿ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment