ಬಂಟ್ವಾಳ ತಾಲೂಕಾಡಳಿತದಿಂದ ದೇಶದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ
ಬಂಟ್ವಾಳ, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ದೇಶದ ಭವಿಷ್ಯದ ರೂವಾರಿಗಳಾಗಿರುವ ವಿದ್ಯಾರ್ಥಿ ಸಮೂಹ ರಾಷ್ಟ್ರೀಯ ಹಬ್ಬಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶದ ಇತಿಹಾಸ ಅರಿತುಕೊಂಡು ಮುನ್ನಡೆಯಬೇಕಾಗಿದೆ ಎಂದು ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಹೇಳಿದರು.
ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಬಿ ಸಿ ರೋಡಿನ ಮಿನಿ ವಿಧಾನಸೌಧ ಮುಂಭಾಗ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣದ ಬಳಿಕ ಇಲ್ಲಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳೇ ಮುಂದೆ ದೇಶ ಮುನ್ನಡೆಸುವ ನಾಯಕರಾಗಲಿದ್ದು, ತಮ್ಮಿಂದಾಗಿ ಮುಂದಿನ ದಿನಗಳಲ್ಲಿ ಭಾರತ ದೇಶ ವಿಶ್ವಗುರುವಾಗಿ ಮುನ್ನಡೆಯಲಿ ಎಂದು ಹಾರೈಸಿದರಲ್ಲದೆ ಸ್ವಾತಂತ್ರ್ಯೋತ್ಸವ ಆಚರಣೆಯಂತಹ ಪ್ರಮುಖ ಕಾರ್ಯಕ್ರಮಗಳಲ್ಲಿ ಮುಖ್ಯ ಭಾಷಣಕ್ಕಾಗಿ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿರುವ ತಹಶೀಲ್ದಾರ್ ಕ್ರಮ ಶ್ಲಾಘನೀಯ ಎಂದರು.
ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ತಾಲೂಕು ದಂಡಾಧಿಕಾರಿ ಡಿ ಅರ್ಚನಾ ಭಟ್ ಧ್ವಜಾರೋಹಣ ನೆರವೇರಿಸಿದರು. ವಿದ್ಯಾಗಿರಿ ಎಸ್ ವಿ ಎಸ್ ಶಾಲಾ ವಿದ್ಯಾರ್ಥಿನಿ ಭೂಮಿಕಾ ಎಸ್ ಶೆಟ್ಟಿ ಸ್ವಾತಂತ್ರ್ಯೋತ್ಸವದ ಬಗ್ಗೆ ಸಂದೇಶ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಬುಡಾ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಭಾಗವಹಿಸಿದ್ದರು.
ತಾ ಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನೋಣಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ ಅಶೋಕ್ ಕುಮಾರ್ ರೈ, ಎಪಿಎಂಸಿ ಅಧಿಕಾರಿ ಶಶಾಂಕ್, ತೋಟಗಾರಿಕಾ ಇಲಾಖಾಧಿಕಾರಿ ಪ್ರದೀಪ್ ಡಿಸೋಜ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯ ಕುಮಾರಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಸಹಿತ ತಾಲೂಕಿನ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ತಹಶೀಲ್ದಾರ್ ಅರ್ಚನಾ ಭಟ್ ಸ್ವಾಗತಿಸಿ, ಇಒ ಸಚಿನ್ ಕುಮಾರ್ ವಂದಿಸಿದರು. ಶಿಕ್ಷಕರುಗಳಾದ ಗೋಪಾಲಕೃಷ್ಣ ನೇರಳಕಟ್ಟೆ ಹಾಗೂ ಸುರೇಖಾ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಪೊಲೀಸ್, ಗೃಹರಕ್ಷಕ ದಳ, ವಿವಿಧ ಶಾಲಾ ಎನ್ ಸಿ ಸಿ, ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ವಿದ್ಯಾರ್ಥಿಗಳು ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತ ಗೀತೆ ಹಾಡಿದರು.
0 comments:
Post a Comment