ಬಂಟ್ವಾಳ, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಅದಕ್ಕಾಗಿ ಅನೇಕ ಹಿರಿಯರು ತಮ್ಮ ಸ್ವಾರ್ಥ ಮರೆತು ಬ್ರಿಟಿಷ್ ಪಾರುಪತ್ಯದ ವಿರುದ್ದ ಹೋರಾಡಿದ್ದಾರೆ. ಇವತ್ತಿನ ನಮ್ಮ ಸ್ವಾತಂತ್ರ್ಯವನ್ನು ಯಾವ ಕಾಲಕ್ಕೂ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಾವುದೇ ಸಂದರ್ಭದಲ್ಲಿ ಏನೇ ಆದರೂ ದೇಶ ಮೊದಲು ಎಂಬ ಪ್ರಾಮಾಣಿಕ ಭಾವದಿಂದ ನಮ್ಮ ದೇಶವನ್ನು ರಕ್ಷಿಸೋಣ ಎಂದು ಹಿರಿಯ ಯಕ್ಷಗಾನ ಅರ್ಥಧಾರಿ, ವಿಶ್ರಾಂತ ಮುಖ್ಯೋಪಾಧ್ಯಾಯ ಸಂಕಪ್ಪ ಶೆಟ್ಟಿ ಸಂಚಯಗಿರಿ ಹೇಳಿದರು.
ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬಿ ಸಿ ರೋಡಿನ ಕನ್ನಡ ಭವನದ ಆವರಣದಲ್ಲಿ ನಡೆದ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಧ್ವಜಾರೋಹಣಗೈದರು. ಕಸಾಪ ಸಂಘಟನಾ ಕಾರ್ಯದರ್ಶಿ ಜಯರಾಮ ಪಡ್ರೆ, ತುಂಬೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ ನಾಯಕ್, ಲತೀಫ್ ಮೊದಲಾದವರು ಭಾಗವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ವಿ ಸು ಭಟ್ ಸ್ವಾಗತಿಸಿ, ಪಾಣೆಮಂಗಳೂರು ಹೋಬಳಿ ಘಟಕಾಧ್ಯಕ್ಷ ಪಿ ಮುಹಮ್ಮದ್ ಪಾಣೆಮಂಗಳೂರು ವಂದಿಸಿದರು.
0 comments:
Post a Comment