ಬಂಟ್ವಾಳ, ಆಗಸ್ಟ್ 23, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ವಾರ್ಡ್ ಸಂಖ್ಯೆ 24 ರ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರ ಭದ್ರತೆ, ಸುರಕ್ಷತೆ ವ್ಯವಸ್ಥೆಗಳಿಲ್ಲದೆ ಸೊರಗುತ್ತಿದೆ. ಇಲ್ಲಿಗೆ ಆವರಣ ಗೋಡೆ, ಸ್ವಚ್ಛತೆ, ಮಕ್ಕಳಿಗೆ ಆಟಿಕೆ ಸಾಮಾಗ್ರಿ, ಪಾರ್ಕ್ ಮೊದಲಾದ ವ್ಯವಸ್ಥೆಗಳನ್ನು ನಿರ್ಮಿಸಲಾಗುವುದು ಎಂದು ಪ್ರತೀ ಬಾರಿ ಸ್ವಾತಂತ್ರ್ಯೋತ್ಸವ ಮೊದಲಾದ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಸ್ಥಳೀಯ ಪುರಸಭಾ ಕೌನ್ಸಿಲರುಗಳಿಂದ ಭಾಷಣದ ಭರವಸೆ ದೊರೆಯುತ್ತಿದೆಯೇ ವಿನಃ ವರ್ಷಗಳು ಮೂರು ಕಳೆದರೂ ಒಂದೇ ಒಂದು ವ್ಯವಸ್ಥೆಯೂ ಒದಗಿಬರುತ್ತಿಲ್ಲ. ಅಂಗನವಾಡಿ ಕೇಂದ್ರದ ಸುತ್ತ ಪೊದೆ ಗಿಡಗಳು ಬೆಳೆದು ಹಾವು-ಸರೀಸೃಪಗಳು ಕೇಂದ್ರದೊಳಗೆ ಸಂಚರಿಸುತ್ತಿದ್ದರೂ, ಬೀದಿ ನಾಯಿಗಳು ಕೇಂದ್ರದ ದಾರಿಗಳಲ್ಲೇ ಬೀಡುಬಿಟ್ಟು ಪುಟಾಣಿಗಳು ಹೆದರಿಕೊಳ್ಳುವ ಪರಿಸ್ಥಿತಿ ಇದ್ದರೂ ಕೇಳುವ ಪರಿಸ್ಥಿತಿ ಇಲ್ಲದಂತಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಜಮೀನು ಸಮಸ್ಯೆ ಅದು, ಇದು ಎಂಬ ನೆಪಗಳನ್ನು ಒಡ್ಡಿ ದಿನದೂಡಲಾಗುತ್ತಿದೆಯಲ್ಲದೆ ಕನಿಷ್ಠ ಅಂಗನವಾಡಿ ಕೇಂದ್ರದ ಸ್ಥಿತಿ-ಗತಿಯನ್ನಾಗಲೀ, ಪುಟಾಣಿಗಳ ಹಿತದೃಷ್ಟಿಯನ್ನಾಗಲೀ, ಕೇಂದ್ರದ ಕಾರ್ಯಕರ್ತರ ಬೇಡಿಕೆಗಳನ್ನಾಗಲೀ ಪರಿಶೀಲನೆ ನಡೆಸುವ ಬಗ್ಗೆಯೂ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ ಎಂಬ ಆಕ್ರೋಶ ಪುಟಾಣಿಗಳ ಪೋಷಕರಿಂದ ಕೇಳಿ ಬರುತ್ತಿದೆ.
ಸರಕಾರ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಪುಟಾಣಿಗಳ ಶೈಕ್ಷಣಿಕ, ಭವಿಷ್ಯದ ಅಭಿವೃದ್ದಿಗೆ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರು ಇಲ್ಲಿನ ಅಂಗನವಾಡಿ ಕೇಂದ್ರ ಇಲ್ಲಗಳ ಆಗರವಾಗಿದೆ. ಪೋಷಕರು ಅನಿವಾರ್ಯ ಪರಿಸ್ಥಿತಿಗೆ ಕಟ್ಟುಬಿದ್ದು ಇಲ್ಲಿಗೆ ಪುಟಾಣಿಗಳನ್ನು ಕಳಿಸಬೇಕಾದ ದರ್ದು ಎದುರಿಸುತ್ತಿರುವುದು ಮಾತ್ರ ವಿಪರ್ಯಾಸ.
0 comments:
Post a Comment