ಬಂಟ್ವಾಳ, ಆಗಸ್ಟ್ 23, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಗಳಲ್ಲಿ ಒಂದಾಗಿರುವ ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್ ಸಂಪರ್ಕ ರಸ್ತೆ ಡಾಮರೀಕರಣ ಕಾಣದೆ ಹಲವು ವರ್ಷಗಳೇ ಕಳೆದಿದ್ದು, ವಾಹನ ಸಂಚಾರ ಅಸಾಧ್ಯವಾಗುವ ರೀತಿಯಲ್ಲಿ ಮುಖ್ಯ ರಸ್ತೆ ಹದಗೆಟ್ಟು ಹೋಗಿದೆ. ಸುಮಾರು ಹತ್ತು ವರ್ಷಗಳಿಗೂ ಅಧಿಕ ಕಾಲದಿಂದ ಈ ರಸ್ತೆ ಡಾಮರೀಕರಣ ಕಂಡಿಲ್ಲ. ಪರಿಣಾಮವಾಗಿ ಇಂದು ರಸ್ತೆಯುದ್ದಕ್ಕೂ ಹೊಂಡ-ಗುಂಡಿಗಳದ್ದೆ ಕಾರುಭಾರು ಕಂಡು ಬರುತ್ತಿದೆ. ಯಾವುದೇ ರೀತಿಯಲ್ಲೂ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಿ ಸಂಚರಿಸಲು ಹೆಣಗಾಟ ನಡೆಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಇದೀಗ ಮಳೆಗಾಲದಲ್ಲಿ ಜೋರಾಗಿ ಮಳೆ ಬಂದರಂತೂ ರಸ್ತೆಯ ಹೊಂಡ-ಗುಂಡಿಗಳಲ್ಲಿ ಮಳೆ ನೀರು ನಿಂತು ಹೊಂಡಗಳ ಆಳ-ಅಗಲವೂ ಗೊತ್ತಾಗದೆ ವಾಹನ ಸವಾರರು ಸಂಚರಿಸಲೂ ಹೆದರುವ ಪರಿಸ್ಥಿತಿ ಇದೆ.
ಮಳೆ ನೀರಿನಿಂದ ಆವೃತವಾಗುವ ರಸ್ತೆ ಹೊಂಡಗಳಿಂದ ಕೆಸರು ಮಿಶ್ರಿತ ನೀರು ವಾಹನ ಸಂಚಾರದ ವೇಳೆ ರಸ್ತೆ ಬದಿ ನಿಂತಿರುವ, ನಡೆದುಕೊಂಡು ಹೋಗುತ್ತಿರುವ ಸಾರ್ವಜನಿಕರ ಮೇಲೆ ಎರಚುತ್ತಿವೆ. ರಸ್ತೆ ಬದಿಯ ಅಂಗಡಿ-ಮನೆಗಳ ಒಳಗೂ ವಾಹನ ಸಂಚಾರದ ವೇಳೆ ಮಳೆ ನೀರು ಅಭಿಷೇಕವಾಗುತ್ತಿರುವ ಪರಿಸರವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ರಸ್ತೆಯ ಹೊಂಡ-ಗುಂಡಿಗಳಿಂದಾಗಿ ಜನ ರಾತ್ರಿ ವೇಳೆ ನಡೆದಾಡುವ ಸಂದರ್ಭ ಕೂಡಾ ರಸ್ತೆ ಹೊಂಡಕ್ಕೆ ಬಿದ್ದು ಕಾಲು ತಿರುವಿನಂತಹ ಗಂಭೀರ ಅಪಾಯಗಳನ್ನೂ ಎದುರಿಸುತ್ತಿದ್ದಾರೆ. ಅಲ್ಲದೆ ಈ ಪ್ರದೇಶದ ರಸ್ತೆಗಳ ಬದಿಗಳಲ್ಲಿ ಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲದೆ ಇರುವುದು, ಇರುವ ಚರಂಡಿಗಳ ಹೂಳೆತ್ತದೆ ಕಳೆ ಗಿಡಗಳು ತುಂಬಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದು ಕೂಡಾ ಇಲ್ಲಿನ ರಸ್ತೆಗಳು ಹಾಳಾಗಲು ಪ್ರಮುಖ ಕಾರಣವಾಗಿದೆ.
ಇಲ್ಲಿನ ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಹಲವು ಬಾರಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ಕದ ತಟ್ಟಿದರೂ ಯಾವುದೇ ರೀತಿಯ ಪ್ರತಿಸ್ಪಂದನೆಯೂ ದೊರೆಯುತ್ತಿಲ್ಲ. ತಕ್ಷಣ ಇಲ್ಲಿನ ರಸ್ತೆ ಅವ್ಯವಸ್ಥೆಗೆ ಕಾಯಕಲ್ಪ ಒದಗಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖಾ ಕಛೇರಿ ಮುಂಭಾಗ ಸಾರ್ವಜನಿಕ ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
![]() |
ಸತೀಶ್ ಪಿ ಸಾಲ್ಯಾನ್ ಮೆಲ್ಕಾರ್ |
ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರಾಗಲೀ, ಪುರಸಭಾ ಕೌನ್ಸಿಲರ್ ಗಳಾಗಲೀ ಯಾವುದೇ ಸ್ಪಂದನೆ ಇಲ್ಲದೆ ಇರುವುದರಿಂದ ಜನ ಬವಣೆ ಅನುಭವಿಸುವಂತಾಗಿದೆ. ಪೇಟೆಯಲ್ಲಿ ಸರಕಾರಿ, ಖಾಸಗಿ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆ, ಆಸ್ಪತ್ರೆ, ಬ್ಯಾಂಕುಗಳು, ಪಾಣೆಮಂಗಳೂರು ಹಾಗೂ ನಂದಾವರ ದೇವಸ್ಥಾನಗಳು, ಮಸೀದಿಗಳು, ದರ್ಗಾಗಳು ಮೊದಲಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕೇಂದ್ರಗಳಿದ್ದು, ತಕ್ಷಣ ಸಂಬಂಧಪಟ್ಟವರು ಇಲ್ಲಿನ ರಸ್ತೆಗೆ ಕಾಯಕಲ್ಪ ಒದಗಿಸಬೇಕು.
ಸತೀಶ್ ಪಿ ಸಾಲ್ಯಾನ್ ಮೆಲ್ಕಾರ್
ಸಾಮಾಜಿಕ ಕಾರ್ಯಕರ್ತರು.
![]() |
ಪಿ.ಎಂ. ಹಾಮದ್ ಬಾವಾ |
ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್ ವರೆಗೆ ಮುಖ್ಯ ರಸ್ತೆ ಹೊಂಡ ಗುಂಡಿಗಳಿಂದ ಹಾಳಾಗಿದೆ. ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್ ವರೆಗಿನ ವಾರ್ಡ್‍ಗಳಿಗೆ ಚುನಾಯಿತರಾದ ಪುರಸಭಾ ಸದಸ್ಯರುಗಳು ಈ ಬಗ್ಗೆ ತಮ್ಮ ಜವಾಬ್ದಾರಿ ಪ್ರದರ್ಶಿಸುತ್ತಿಲ್ಲ. ಶಾಸಕರು ಕೂಡಾ ಇಲ್ಲಿನ ರಸ್ತೆ ಅವ್ಯವಸ್ಥೆ ಬಗ್ಗೆ ಗಮನ ಹರಿಸುತ್ತಿಲ್ಲ. ಬಿ ಸಿ ರೋಡು ಮುಖ್ಯ ವೃತ್ತದಿಂದ ಒಳಗೆ ಬಂದು ಗೂಡಿನಬಳಿ, ಪಾಣೆಮಂಗಳೂರು ಪೇಟೆಯಾಗಿ ಮೆಲ್ಕಾರ್ ವರೆಗೆ ಬರುವ ರಸ್ತೆಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ಜೊತೆಗೆ ಪಾಣೆಮಂಗಳೂರು ಪ್ರದೇಶಕ್ಕೆ ಸಾರಿಗೆ ಸಂಪರ್ಕ ಹಾಗೂ ಸಂಚಾರಕ್ಕೆ ಯೋಗ್ಯವಾದ ಸೇತುವೆ ನಿರ್ಮಾಣ ಮಾಡಿ ಜನಪ್ರತಿನಿಧಿಗಳು ಜವಾಬ್ದಾರಿ ಮೆರೆಯಬೇಕು.
ಪಿ.ಎಂ. ಹಾಮದ್ ಬಾವಾ
ಮಾಜಿ ಸದಸ್ಯರು, ಭೂನ್ಯಾಯ ಮಂಡಳಿ ಬಂಟ್ವಾಳ
0 comments:
Post a Comment