ಮಂಗಳೂರು, ಆಗಸ್ಟ್ 26, 2025 (ಕರಾವಳಿ ಟೈಮ್ಸ್) : ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ರೋಟರಿ ಕ್ಲಬ್ ಮಂಗಳೂರು ನಾರ್ತ್ ಇದರ ವತಿಯಿಂದ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಮಹಿಳಾ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗಳನ್ನು ಸುಲಲಿತವಾಗಿ ನೆರವೇರಿಸಲು ಅನುಕೂಲವಾಗುವಂತಹ ವಿಶೇಷ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಸ್ತ್ರೀರೋಗ ಸಂಬಂಧಿ ಚಿಕಿತ್ಸೆಯಲ್ಲಿ ಅದ್ಭುತ ಕ್ರಾಂತಿ ಮಾಡಿರುವ ಲೇಡಿಗೋಷನ್ ಆಸ್ಪತ್ರೆಗೆ ಸಮಾಜ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ನೀಡಿದ ಈ ಕೊಡುಗೆಯಿಂದ ಬಡಜನತೆಯ ಕಣ್ಣೀರನ್ನು ಒರೆಸುವ ನಿಟ್ಟಿನಲ್ಲಿ ಇನ್ನಷ್ಟು ಮುನ್ನಡೆಯನ್ನು ಸಾಧಿಸಲಿ ಎಂದು ಹಾರೈಸಿದರು.
ರೋಟರಿ ಮಾಜಿ ಗವರ್ನರ್ ಗಳಾದ ರೋ ವಿಕ್ರಮದತ್ತ ಮತ್ತು ರೋ ಕೃಷ್ಣ ಶೆಟ್ಟಿ ಅವರು ರೋಟರಿ ಗ್ಲೋಬಲ್ ಗ್ರ್ಯಾಂಟ್ ಹಾಗೂ ಅದನ್ನು ಸರಕಾರಿ ಆರೋಗ್ಯ ಕ್ಷೇತ್ರವಾದಂತಹ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಮರ್ಥವಾಗಿ ಉಪಯೋಗಿಸಿಕೊಂಡಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೋಟೇರಿಯನ್ ಮೇಜರ್ ಡೋನರ್ ಡಾ ಶಿವಪ್ರಸಾದ್ ರೈ ಹಾಗೂ ರೋಟರಿ ಮಂಗಳೂರು ನಾರ್ತ್ ಅಧ್ಯಕ್ಷ ರೊಟೇರಿಯನ್ ಅರುಣ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಅಧೀಕ್ಷಕ ಡಾ ದುರ್ಗಾಪ್ರಸಾದ್ ಎಂ ಆರ್ ಅವರು ಮಾತನಾಡಿ, ಗತ ವರ್ಷದಲ್ಲಿ ಸುಮಾರು ಇನ್ನೂರ ನಲವತ್ತೆರಡು ಮಹಿಳಾ ಕ್ಯಾನ್ಸರ್ ಸಂಬಂಧಿ ಶಸ್ತ್ರ ಚಿಕಿತ್ಸೆಗಳನ್ನು ಕಸ್ತೂರ್ಬಾ ಮೆಡಿಕಲ್ ಕಾಲೇಜು ವಿಶೇಷ ತಜ್ಞರುಗಳ ಸಹಕಾರದಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ನೆರವೇರಿಸಲಾಗಿದ್ದು, ರೋಟರಿ ಕ್ಲಬ್ ವತಿಯಿಂದ ನೀಡಲಾಗಿರುವ ಈ ಉಪಕರಣಗಳು ಈ ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ವಿಧಾನಗಳಲ್ಲಿ ಇನ್ನೂ ಹೆಚ್ಚಿನ ಪರಿಪೂರ್ಣತೆಯನ್ನು ತರುವುದರಲ್ಲಿ ಸಂದೇಹವಿಲ್ಲ ಎಂದರು. ಈ ಕೊಡುಗೆಗಾಗಿ ಅಂತರ್ ರಾಷ್ಟ್ರೀಯ ಅನುದಾನವನ್ನು ತಂದುಕೊಡಲು ಪರಿಶ್ರಮಿಸಿದ ಪ್ರತಿಯೊಬ್ಬರನ್ನೂ ಸರಕಾರಿ ಲೇಡಿಗೋಷನ್ ವತಿಯಿಂದ ಗೌರವಿಸಿದರು.
ಕೆ.ಎಂ.ಸಿ. ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ ಶ್ರದ್ಧಾ ಶೆಟ್ಟಿ ಹಾಗೂ ವೈದ್ಯಾಧಿಕಾರಿ ಡಾ ಜಗದೀಶ್ ಉಪಸ್ಥಿತರಿದ್ದರು. ಶುಶ್ರೂಷಾಧಿಕಾರಿಗಳಾದ ಶ್ರೀಮತಿ ಜ್ಯೋತಿ ವಂದಿಸಿ, ಶ್ರೀಮತಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment