ಬಂಟ್ವಾಳ, ಆಗಸ್ಟ್ 26, 2025 (ಕರಾವಳಿ ಟೈಮ್ಸ್) : ಮನೆ ಸಮೀಪದ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಕರುವನ್ನು ಕದ್ದುಕೊಂಡು ಹೋಗುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಘಟನೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕರುವಿನ ಮಾಲಿಕ ಹರೀಶ್ ಪಿ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ತಮ್ಮ ಮನೆಯಲ್ಲಿ ದನಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡಿಕೊಂಡಿರುವುದಾಗಿದೆ. ಇವರಲ್ಲಿ ಒಟ್ಟು 4 ದನಗಳಿದ್ದು ಅದರಲ್ಲಿ ಒಂದು ವರ್ಷದ ಕರುವನ್ನು ಮನೆಯ ಹತ್ತಿರವಿರುವ ಬಯಲು ಜಾಗದಲ್ಲಿ ಬೆಳಿಗ್ಗೆ 8 ಗಂಟೆಗೆ ಮೇಯಲು ಬಿಟ್ಟಿದ್ದು, ಬಳಿಕ ಇವರು ಕುಟುಂಬ ಸಮೇತ ಸಂಜೆ 4.30 ರ ವೇಳೆಗೆ ಮಂಗಳೂರಿಗೆ ಹೋಗಿದ್ದರು. ಈ ಸಂದರ್ಭ ಸಂಜೆ 5.30ಕ್ಕೆ ಮೇಯಲು ಬಿಟ್ಟ ಕರುವನ್ನು ಆರೋಪಿಗಳಾದ ಹಾರೂನ್ ರಶೀದ್ ಹಾಗೂ ರಾಜಿಕ್ ಎಂಬವರು ಕೊಂಡು ಹೋಗುತ್ತಿದ್ದ ಸಂದರ್ಭ ದಾರಿಯಲ್ಲಿ ಹರೀಶ್ ಅವರ ನೆರೆಮನೆಯ ಅನಿತಾ ಅವರು ಆರೋಪಿಗಳಲ್ಲಿ ವಿಚಾರಿಸಿದಾಗ ಈ ಕರು ನಮ್ಮದಾಗಿದ್ದು, ನಾವು ಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಅದೇ ವೇಳೆಗೆ ಅಲ್ಲಿಗೆ ಬಂದ ಹರೀಶ್ ಅವರ ತಮ್ಮ ದಿವಾಕರ್ ಅವರು ದನವನ್ನು ಕಂಡು ಇದು ನನ್ನ ಅಣ್ಣನ ಮನೆಯ ಕರುವೆಂದು ಗುರುತು ಪತ್ತೆಮಾಡಿ ಅಣ್ಣ ಬರುವವರೆಗೆ ಕಾಯಿರಿ ಎಂದು ಅಣ್ಣನಿಗೆ ಕರೆ ಮಾಡಿ ತಿಳಿಸಿದ್ದಾರೆ. ಆಗ ಹರೀಶ್ ಅವರು ಸ್ಥಳಕ್ಕೆ ಬಂದು ವಿಚಾರಿಸಿ ಕರುವಿನ ಗುರುತು ಪತ್ತೆಯ ಬಗ್ಗೆ ತಿಳಿಸಿದ್ದಾರೆ. ಇಷ್ಟರಲ್ಲಾಗಲೇ ಸಂಜೆ 7 ಗಂಟೆ ಆಗಿದ್ದು, ಆಗ ಅಲ್ಲಿಗೆ ಬಂದ ಗಣೇಶ್ ಸುವರ್ಣ ಮತ್ತು ಉದಯ್ ತುಂಬೆ ಅವರು ಅವರಲ್ಲಿ ಈ ಕರು ಹರೀಶ್ ಅವರ ಕರುವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ಆರೋಪಿಗಳು ಕರುವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಆರೋಪಿಗಳು ಕಳವಿಗೆ ಯತ್ನಿಸಿದ ಕರುವಿನ ಮೌಲ್ಯ 10 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹರೀಶ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































0 comments:
Post a Comment