ಬಂಟ್ವಾಳ, ಆಗಸ್ಟ್ 19, 2025 (ಕರಾವಳಿ ಟೈಮ್ಸ್) : ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ನಿಂತಿದ್ದ ವೇಳೆ ಕಾರೊಂದು ಹಿಟ್ ಆಂಡ್ ರನ್ ಮಾಡಿದ ಪರಿಣಾಮ ಸ್ಕೂಟರ್ ಸವಾರೆ ಗಾಯಗೊಂಡ ಘಟನೆ ಬಿ ಸಿ ರೋಡು ಸರ್ವಿಸ್ ರಸ್ತೆಯ ಸನ್ಮಾನ್ ಬಾರ್ ಮುಂಭಾಗದಲ್ಲಿ ಆಗಸ್ಟ್ 16 ರಂದು ರಾತ್ರಿ ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರೆಯನ್ನು ಕಳ್ಳಿಗೆ ಗ್ರಾಮದ ಕುಂಜತ್ತೂರು ನಿವಾಸಿ ಶ್ರೀಮತಿ ವನಿತಾ (36) ಎಂದು ಹೆಸರಿಸಲಾಗಿದೆ. ಇವರು ತನ್ನ ಸ್ಕೂಟರಿನಲ್ಲಿ ಪತಿ ಶೋಭನ್ ಕುಮಾರ್ ಅವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಕಲ್ಲಡ್ಕದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಭಾಗಿಯಾಗಿ ಬಳಿಕ ರಾತ್ರಿ ವೇಳೆ ಮನೆ ಕಡೆ ಸಂಚರಿಸುತ್ತಿದ್ದ ಸಂದರ್ಭ ಬಿ ಸಿ ರೋಡಿನಲ್ಲಿ ಈ ಅಪಘಾತ ಸಂಭವಿಸಿದೆ.
ಇವರು ಬಿ ಸಿ ರೋಡಿನಲ್ಲಿ ಸ್ಕೂಟರ್ ನಿಲ್ಲಿಸಿ ಪತಿ ಸಮೀಪದ ಫಾಸ್ಟ್ ಫುಡ್ ಅಂಗಡಿಗೆ ಊಟ ತರಲು ತೆರಳಿದ್ದ ವೇಳೆ ಹಿಂದಿನಿಂದ ಬಂದ ಬಿಳಿ ಬಣ್ಣದ ಕಾರು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ. ಕಾರು ಚಾಲಕ ಇವರ ಸ್ಕೂಟರಿಗೆ ಮಾತ್ರವಲ್ಲದೆ ಹತ್ತಿರದಲ್ಲಿ ನಿಲ್ಲಿಸಿದ ಇನ್ನೊಂದು ಸ್ಕೂಟರಿಗೂ ಅಪಘಾತಪಡಿಸಿದ್ದಾನೆ. ಅಪಘಾತದಿಂದ ವನಿತಾ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಇವರು ಸೋಮಯಾಜಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅಪಘಾತದಿಂದ ವನಿತಾ ಅವರ ಸ್ಕೂಟರ್ ಹಾಗೂ ಹತ್ತಿರದಲ್ಲಿ ನಿಲ್ಲಿಸಲಾಗಿದ್ದ ಇನ್ನೊಂದು ಸ್ಕೂಟರ್ ಕೂಡಾ ಜಖಂಗೊಂಡಿದೆ. ಈ ಬಗ್ಗೆ ವನಿತಾ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment