ಬಂಟ್ವಾಳ, ಆಗಸ್ಟ್ 01, 2025 (ಕರಾವಳಿ ಟೈಮ್ಸ್) : ಜುಲೈ 28 ರಂದು ಮನೆಯಿಂದ ಸ್ಕೂಟರಿನಲ್ಲಿ ತೆರಳಿ ಬಳಿಕ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಕಡೇಶಿವಾಲಯ ಗ್ರಾಮದ ನಿವಾಸಿ ಯುವಕ ಹೇಮಂತ್ ಆಚಾರ್ಯ (21) ಎಂಬಾತನ ಮೃತದೇಹವು ಗುರುವಾರ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಮುಗೇರು ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ನಾಪತ್ತೆಯಾಗಿದ್ದ ಹೇಮಂತ್ ಅವರ ಸ್ಕೂಟರ್ ಹಾಗೂ ಮೊಬೈಲ್ ಜುಲೈ 29 ರಂದು ಜಕ್ರಿಬೆಟ್ಟುವಿನಲ್ಲಿ ಪತ್ತೆಯಾಗಿತ್ತು. ಇದರಿಂದಾಗಿ ಆತ ನದಿಗೆ ಹಾರಿರುವ ಬಗ್ಗೆ ಸಂಶಯಗೊಂಡು ಜುಲೈ 29 ರಿಂದಲೇ ಸ್ಥಳೀಯ ಮುಳುಗು ತಜ್ಞ ನಿಸಾರ್ ಎಂಬವರ ನೇತೃತ್ವದಲ್ಲಿ ಸ್ಥಳೀಯ ಯುವಕರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನೇತ್ರಾವತಿ ನದಿಯಲ್ಲಿ ಹುಡುಕಾಟ ಆರಂಭಿಸಿದ್ದರು. ಆದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ಜುಲೈ 31 ರಂದು ಈಶ್ವರ್ ಮಲ್ಪೆ ನೇತೃತ್ವದಲ್ಲಿ ಪರಿಣಿತರ ತಂಡ ಹಾಗೂ ಎನ್ ಡಿ ಆರ್ ಎಫ್ ಕೂಡಾ ಕಾರ್ಯಾಚರಣೆಗೆ ಆಗಮಿಸಿತ್ತು. ಆದರೂ ಹೇಮಂತ್ ಬಗ್ಗೆ ಸುಳಿವು ದೊರೆತಿರಲಿಲ್ಲ. ಬಳಿಕ ಗುರುವಾರ ಅಪರಾಹ್ನ ಡ್ರೋನ್ ಬಳಸಿ ತುಂಬೆ ಡ್ಯಾಮಿನಿಂದ ಕೆಳಕ್ಕೆ ಶೋಧ ಕಾರ್ಯಾಚರಣೆ ನಡೆಸಲಾಯಿತು. ಡ್ರೋನ್ ಕ್ಯಾಮೆರಾ ನೇತ್ರಾವತಿಯಲ್ಲಿ ಮೃತದೇಹ ತೇಲುತ್ತಿರುವುದನ್ನು ಪತ್ತೆ ಹಚ್ಚಿದ ಹಿನ್ನಲೆಯಲ್ಲಿ ಶೋಧ ತಂಡ ಗುರುವಾರ ಸಂಜೆ ಹೇಮಂತ್ ಮೃತದೇಹವನ್ನು ಮೇಲಕ್ಕೆತ್ತಿದೆ ಎಂದು ತಿಳಿದು ಬಂದಿದೆ.
0 comments:
Post a Comment