ಭೂಸುಧಾರಣೆ ಕಾನೂನು ಬಗ್ಗೆ ಇಂದಿನ ಮಕ್ಕಳು ಅರ್ಥ ಮಾಡಿಕೊಳ್ಳಬೇಕು : ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. - Karavali Times ಭೂಸುಧಾರಣೆ ಕಾನೂನು ಬಗ್ಗೆ ಇಂದಿನ ಮಕ್ಕಳು ಅರ್ಥ ಮಾಡಿಕೊಳ್ಳಬೇಕು : ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. - Karavali Times

728x90

20 August 2025

ಭೂಸುಧಾರಣೆ ಕಾನೂನು ಬಗ್ಗೆ ಇಂದಿನ ಮಕ್ಕಳು ಅರ್ಥ ಮಾಡಿಕೊಳ್ಳಬೇಕು : ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

ಜಿಲ್ಲಾ ಮಟ್ಟದ ಡಿ ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ


ಮಂಗಳೂರು, ಆಗಸ್ಟ್ 20, 2025 (ಕರಾವಳಿ ಟೈಮ್ಸ್) : ಲಕ್ಷಾಂತರ ಮಂದಿ ಭೂರಹಿತರು ಭೂಮಾಲೀಕರಾಗಲು ಕಾರಣರಾದ ಭೂಸುಧಾರಣೆ ಕಾನೂನು ಮತ್ತು ಅಂದಿನ ವ್ಯವಸ್ಥೆಯ ಇತಿಹಾಸದ ಬಗ್ಗೆ ಇಂದಿನ ಮಕ್ಕಳು ಮತ್ತು ಯುವಪೀಳಿಗೆ ತಿಳಿದುಕೊಳ್ಳಬೇಕಿದೆ  ಎಂದು  ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಯುಕ್ತ ಆಶ್ರಯದಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಾಮಾಜಿಕ ನ್ಯಾಯದ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇವರಾಜು ಅರಸು ಅವರು ಜಾರಿಗೆ ತಂದ ಭೂ ಸುಧಾರಣೆ ಕಾನೂನಿನಿಂದಾಗಿ ಹಲವಾರು ಮಂದಿ ಗೇಣಿದಾರರು ಹಾಗೂ ಭೂ ರಹಿತರಿಗೆ ಭೂಮಿಯ ಮಾಲೀಕತ್ವ ಲಭ್ಯವಾಯಿತು. ಇಂದು ಈ ಭೂಮಿಯಲ್ಲಿ ಪ್ರಯೋಜನ ಪಡೆಯುತ್ತಿರುವ ಇಂದಿನ ಪೀಳಿಗೆಯವರಿಗೆ ತಮಗೆ ಈ ಭೂಮಿ ಹೇಗೆ ದೊರಕಿದ್ದು ಎಂಬುದರ ಮಾಹಿತಿ ಇಲ್ಲದಿರುವುದು ವಿಷಾದÀಕರ. ತಮ್ಮ ಕುಟುಂಬದ ಹಿರಿಯರಿಂದ ಮತ್ತು ಪಾಲಕರಿಂದ ಈಗಿನ ಮಕ್ಕಳು ಇದರ ಮಾಹಿತಿ ಪಡೆಯಬೇಕು ಎಂದು ಅವರು ತಿಳಿಸಿದರು.

      ಉಳುವವನೇ ಹೊಲದ ಒಡೆಯ ಎಂಬ ಕಾನೂನು ದೇಶದಲ್ಲಿ ಪರಿಣಾಮಕಾರಿಯಾಗಿ ಜಾರಿಯಾದ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖವಾಗಿದೆ. ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟು ದೇವರಾಜ ಅರಸು ಅವರು ಇದನ್ನು ಜಾರಿಗೆ ತಂದರು ಎಂದು ಜಿಲ್ಲಾಧಿಕಾರಿಗಳು ಹೇಳಿದರು.  

      ಉಪನ್ಯಾಸಗೈದ ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ  ಅಬ್ದುಲ್ ರಝಾಕ್ ಮಾತನಾಡಿ, ಅರಸು ಅವರ ಸಂಪುಟದಲ್ಲಿ ಅಂದು ಸಚಿವರಾಗಿದ್ದ ಸುಬ್ಬಯ್ಯ ಶೆಟ್ಟಿ ಅವರು ಅರಸು ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಭೂಸುಧಾರಣೆ ಕಾನೂನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತಾಯಿತು ಎಂದರು.

    ಹಾಸ್ಟೆಲ್‍ಗಳನ್ನು ಸ್ಥಾಪಿಸುವ ಮೂಲಕ ದುರ್ಬಲ ವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಲು ಕಾರಣಕರ್ತರಾದರು. ಜನತಾ ಮನೆ, ನಿವೇಶನ ಒದಗಿಸುವ ಹಾಗೂ ಪ್ರತಿ ಮನೆಗೆ ಒಂದು ಬಲ್ಬ್ ವಿದ್ಯುತ್ ಒದಗಿಸುವ ಭಾಗ್ಯಜ್ಯೋತಿ ಯೋಜನೆ ಜಾರಿಗೆ ತರುವ ಮೂಲಕ ಬಡವರ ಪ್ರಗತಿಗೆ ದೇವರಾಜ ಅರಸು ಪ್ರಾಮಾಣಿಕವಾಗಿ ಶ್ರಮಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ  ಅಧ್ಯಕ್ಷೆ  ಮಮತಾ ಡಿ ಎಸ್ ಗಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ನರ್ವಡೆ ವಿನಾಯಕ  ಕಾರ್ಭಾರಿ,  ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ ಮೊದಲಾದವರು ಭಾಗವಹಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾ ಎನ್ ನಾಯಕ್  ಸ್ವಾಗತಿಸಿದರು. ಇದೇ ವೇಳೆ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ  ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 

  • Blogger Comments
  • Facebook Comments

0 comments:

Post a Comment

Item Reviewed: ಭೂಸುಧಾರಣೆ ಕಾನೂನು ಬಗ್ಗೆ ಇಂದಿನ ಮಕ್ಕಳು ಅರ್ಥ ಮಾಡಿಕೊಳ್ಳಬೇಕು : ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. Rating: 5 Reviewed By: karavali Times
Scroll to Top