ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವ ಫಲಾನುಭವಿಗಳ ವಿರುದ್ದ ಕ್ರಮ ಕೈಗೊಳ್ಳಿ : ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚನೆ - Karavali Times ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವ ಫಲಾನುಭವಿಗಳ ವಿರುದ್ದ ಕ್ರಮ ಕೈಗೊಳ್ಳಿ : ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚನೆ - Karavali Times

728x90

20 August 2025

ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವ ಫಲಾನುಭವಿಗಳ ವಿರುದ್ದ ಕ್ರಮ ಕೈಗೊಳ್ಳಿ : ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚನೆ

ಮಂಗಳೂರು, ಆಗಸ್ಟ್ 20, 2025 (ಕರಾವಳಿ ಟೈಮ್ಸ್) : ಅನ್ನಭಾಗ್ಯ ಯೋಜನೆಯಡಿ ದೊರಕುವ ಅಕ್ಕಿಯನ್ನು ಮಾರಾಟ ಮಾಡುವ ಫಲಾನುಭವಿಗಳನ್ನು ಗುರುತಿಸಿ  ಕ್ರಮ ಕೈಗೊಳ್ಳುವಂತೆ  ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ. 

ಬುಧವಾರ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫಲಾನುಭವಿಗಳೇ ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದೆ. ಅಂತಹವರ ಬಗ್ಗೆ ನಿಗಾ ಇರಿಸಿ ಆಗಿಂದಾಗ್ಗೆ ಪರಿಶೀಲನೆ ನಡೆಸಬೇಕು. ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಯ ಮೂಟೆಗಳನ್ನು  ಸ್ವಚ್ಛ ಸ್ಥಳಗಳಲ್ಲಿ  ಇರಿಸಬೇಕು. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ಅವರು ಸೂಚಿಸಿದರು. 

ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿಯೋಜನೆ, ಯುವನಿಧಿ, ಗೃಹಲಕ್ಷ್ಮಿ ಯೋಜನೆಗಳಿಂದ ಬಡವರು ವಂಚಿತರಾಗಬಾರದು. ಪ್ರತಿಯೊಬ್ಬರೂ ಈ ಯೋಜನೆಯ ಅನುಕೂಲವನ್ನು ಪಡೆಯಬೇಕು. ಗೃಹಲಕ್ಷ್ಮಿ ಯೋಜನೆಯಡಿ ತಾಲೂಕುವಾರು ನೋಂದಣಿ ಹಾಗೂ ಮಂಜೂರಾದ ಸಹಾಯಧನ ಪಡೆದುಕೊಂಡ ಫಲಾನುಭವಿಗಳ ಪಟ್ಟಿ ಹಾಗೂ ಮೊತ್ತದ ವಿವರವನ್ನು ಗ್ರಾಮ ಪಂಚಾಯತ್‍ಗಳಲ್ಲಿ  ಮುಂದಿನ ಸಭೆಯಲ್ಲಿ ನೀಡಬೇಕು ಎಂದವರು ಸೂಚಿಸಿದರು. ಶಕ್ತಿ ಯೋಜನೆಯು ಗೋಲ್ಡನ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ಸೇರಿಕೊಂಡಿರುವಲ್ಲಿ ಸಾರಿಗೆ ಇಲಾಖೆಯು  ಪ್ರಮುಖ ಪಾತ್ರ ವಹಿಸಿದೆ ಎಂದರು. 

ಮಂಗಳೂರು-ಮೂಡಬಿದ್ರೆ-ಕಾರ್ಕಳ ಕೆ ಎಸ್ ಆರ್ ಟಿ ಸಿ ತಾತ್ಕಾಲಿಕ ಪರ್ಮಿಟ್ ಮುಗಿಯುತ್ತಿದ್ದು, ಖಾಸಗಿಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತಾರೆ ಎಂದು ಮೂಡಬಿದ್ರೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು. ಪ್ರಾದೇಶಿಕ ಸಾರಿಗೆ ಇಲಾಖೆಗೆ ಈಗಾಗಲೇ ತಾತ್ಕಾಲಿಕ ಪರ್ಮಿಟ್ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಯುವನಿಧಿ ಯೋಜನೆಗೆ ಜಿಲ್ಲೆಯಲ್ಲಿ ಒಟ್ಟು 6185 ಅಭ್ಯರ್ಥಿಗಳ ನೋಂದಣಿಯಾಗಿದ್ದು,  5,283 ಅಭ್ಯರ್ಥಿಗಳಿಗೆ ಪಾವತಿ ಆಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಈ ಯೋಜನೆಯ ಬಗ್ಗೆ  ಮಾಹಿತಿಯನ್ನು ನೀಡಲು ಅಭಿಯಾನಗಳನ್ನು ಮಾಡಬೇಕೆಂದು ನಿರ್ಣಯ ಮಾಡಲಾಯಿತು. 

ಸಭೆಯಲ್ಲಿ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ ಎಸ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಜೋಕಿಂ ಡಿಸೋಜಾ, ಸುರೇಖಾ ಚಂದ್ರಹಾಸ್, ಶೇಖರ ಕುಕ್ಕೇಡಿ, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ,  ಜಯಂತಿ ಬಿ ಎ, ಶಾಹುಲ್ ಹಮೀದ್, ಉಮಾನಾಥ ಶೆಟ್ಟಿ, ರಫೀಕ್ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವ ಫಲಾನುಭವಿಗಳ ವಿರುದ್ದ ಕ್ರಮ ಕೈಗೊಳ್ಳಿ : ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚನೆ Rating: 5 Reviewed By: karavali Times
Scroll to Top