ಬಂಟ್ವಾಳ, ಆಗಸ್ಟ್ 18, 2025 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳ ವಿರುದ್ದ ಅಪಪ್ರಚಾರ, ನಿಂದನೆ, ಅವಹೇಳನ, ತೇಜೋವಧೆಯಂತಹ ಕೃತ್ಯಗಳನ್ನು ಶ್ರೀ ಧರ್ಮಸ್ಥಳ ಧರ್ಮರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು ಮುಖಂಡರು ತೀವ್ರವಾಗಿ ಖಂಡಿಸಿದ್ದು, ಈ ಬಗ್ಗೆ ಆಗಸ್ಟ್ 20 ರಂದು ಬಿ ಸಿ ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಜನಾಗ್ರಹ ಸಭೆ ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಸೋಮವಾರ ಬಿ ಸಿ ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ವೇದಿಕೆಯ ಪ್ರಮುಖರು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ದ ನಡೆಯುತ್ತಿರುವ ಅಪಪ್ರಚಾರಗಳು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಇದರ ಹಿಂದೆ ಎಡಚರರು, ನಗರ ನಕ್ಸಲರ ಕೈವಾಡವಿದೆ ಎಂದು ಆರೋಪಿಸಿದರು. ಶತಮಾನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುತ್ತಾ ಬರುತ್ತಿರುವ ಸಾಮಾಜಿಕ ಕಾರ್ಯಕ್ರಮಗಳಾದ ಅನ್ನದಾನ, ವಸ್ತ್ರದಾನ, ವಿದ್ಯಾದಾನ, ಅಭಯದಾನ, ಔಷಧದಾನ ಮೊದಲಾದ ಉದಾತ್ತ ಸೇವೆಗಳನ್ನು ನಿಲ್ಲಿಸಬೇಕು. ಆ ಮೂಲಕ ಭವ್ಯವಾದ ಸಂಸ್ಕøತಿಯನ್ನು ನಾಶ ಮಾಡಬೇಕು ಎಂಬ ಅಂತರಾಷ್ಟ್ರೀಯ ಷಡ್ಯಂತ್ರ ಇದರ ಹಿಂದಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಿರಂತರವಾದ ಸುಳ್ಳು ಆಪಾದನೆಗಳು, ಆಧಾರರಹಿತ ಕಪೋಲ ಕಲ್ಪಿತ ಸುದ್ದಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟು ಕ್ಷೇತ್ರದ ಧರ್ಮಾಧಿಕಾರಿಗಳನ್ನು ಕೆಟ್ಟ ಪದಗಳಿಂದ ನಿಂದಿಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೃತ್ಯವನ್ನು ಖಂಡಿಸುವುದಾಗಿ ತಿಳಿಸಿದ ಪ್ರಮುಖರು ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮರಕ್ಷಣಾ ವೇದಿಕೆಯ ಪ್ರಮುಖರಾದ ರುಕ್ಮಯ್ಯ ಪೂಜಾರಿ, ಪ್ರಕಾಶ್ ಕಾರಂತ್, ಸುದರ್ಶನ್ ಜೈನ್, ರಾಮದಾಸ ಬಂಟ್ವಾಳ, ಸದಾನಂದ ನಾವೂರು, ಪ್ರಭಾಕರ ಪ್ರಭು, ತುಕಾರಾಂ ಪೂಜಾರಿ, ಅಶೋಕ್ ಶೆಟ್ಟಿ ಸರಪಾಡಿ, ತುಂಗಪ್ಪ ಬಂಗೇರ, ಸುಭಾಶ್ಚಂದ್ರ ಜೈನ್, ಪ್ರವೀಣ್ ಕಾಡಬೆಟ್ಟು, ಸುರೇಶ್ ಕುಲಾಲ್, ವಸಂತ ಮಣಿಹಳ್ಳ, ಪುರುಷೋತ್ತಮ, ಶೇಖರ ಸಾಮಾನಿ, ರೋನಾಲ್ಡ್ ಡಿಸೋಜ, ನವೀನ್ ಚಂದ್ರ ಶೆಟ್ಟಿ, ಜಯಚಂದ್ರ, ಜಯಕೀರ್ತಿ ಜೈನ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment