ಬಂಟ್ವಾಳ, ಆಗಸ್ಟ್ 06, 2025 (ಕರಾವಳಿ ಟೈಮ್ಸ್) : ವ್ಯಾಪಾರ ಮುಗಿಸಿ ಬರುವಾಗ ದಾರಿಯಲ್ಲಿ ನಿರ್ಮಾಣ ಹಂತದ ಮನೆಯಲ್ಲಿ ರಾತ್ರಿ ಮಲಗಿದ್ದ ವ್ಯಕ್ತಿಗೆ ನಾಲ್ಕು ಮಂದಿಯ ತಂಡ ಸಿಲಿಂಡರ್ ಕದ್ದಿದ್ದಿ ಎಂದು ಆರೋಪಿಸಿ ಹಲ್ಲೆ ನಡೆಸಿದ ಘಟನೆ ಪೊಳಲಿ ಗ್ರಾಮ ಪಂಚಾಯತ್ ಸಮೀಪ ಆಗಸ್ಟ್ 4 ರಂದು ರಾತ್ರಿ ನಡೆದಿದೆ.
ಈ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿ, ಮೂಲತಃ ಮೂಡಬಿದ್ರೆ ತಾಲೂಕು, ತೋಡಾರು ಗ್ರಾಮದ ಹಿದಾಯತ್ ನಗರ ನಿವಾಸಿ, ಪ್ರಸ್ತುತ ಬಿ ಮೂಡ ಗ್ರಾಮದ ಪರ್ಲಿಯಾ ಜೋಹರಾ ಕಾಂಪ್ಲೆಕ್ಸಿನ ಬಾಡಿಗೆ ಮನೆಯಲ್ಲಿ ಕಳೆದ ಐದಾರು ತಿಂಗಳಿನಿಂದ ವಾಸವಾಗಿರುವ ಹಸನ್ ಬಾವ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಇವರು ಆಗಸ್ಟ್ 4 ರಂದು ಗುರುಪುರ ಕೈಕಂಬದಲ್ಲಿ ವ್ಯಾಪಾರ ಮುಗಿಸಿ ಹೊರಟು ಬರುತ್ತಾ ಮದ್ಯ ಸೇವನೆ ಮಾಡಿದ್ದು, ಅಮಲು ಜಾಸ್ತಿಯಾಗಿರುವುದರಿಂದ ಈ ಮೊದಲಿನಂತೆ ರಾತ್ರಿ 10.45 ಗಂಟೆಗೆ ಪೊಳಲಿ ಗ್ರಾಮ ಪಂಚಾಯತ್ ಸಮೀಪ ಯಾರು ವಾಸ್ತವ್ಯ ಇರದ ನಿರ್ಮಾಣ ಹಂತದ ಮನೆಯ ಸಮೀಪ ಬೈಕ್ ನಿಲ್ಲಿಸಿ ಅಲ್ಲಿಗೆ ಹೋಗಿ ಮಲಗಿದ್ದು, ಈ ಮನೆಯ ಸಮೀಪ ಅವರು ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ಖರೀದಿಸುವ ತೇಜರಾಜ್ ಎಂಬವರ ಮನೆ ಇದ್ದು, ಹಸನ್ ಬಾವಾ ಮಲಗಿದ್ದಲ್ಲಿಗೆ ರಾತ್ರಿ 11 ಗಂಟೆ ವೇಳೆಗೆ ಪರಿಚಯದ ತೇಜರಾಜ್, ಭರಣಿಧರ ಹಾಗೂ ಇತರ ಇಬ್ಬರು ಅಪರಿಚಿತರು ಏಕಾಏಕಿ ಬಂದು ಮಲಗಿದ್ದ ಇವರನ್ನು ತುಳಿದು ಎಬ್ಬಿಸಿ, “ನೀನು ಯಾಕೆ ಇಲ್ಲಿ ಮಲಗಿದ್ದಿ, ನಮ್ಮ ಗ್ಯಾಸ್ ಸಿಲಿಂಡರ್ ನೀನೇ ಕದ್ದಿದ್ದು, ಇವತ್ತು ಸಿಕ್ಕಿಬಿದ್ದಿದ್ದಿಯಾ” ಎಂದು ಹೇಳಿ ತೇಜರಾಜ್ ಅವರು ಕೋಲಿನಿಂದ ಹೊಡೆದಿದ್ದು, ಉಳಿದವರು ಕೈಯಿಂದ ಹೊಡೆದು, ಕಾಲಿನಿಂದ ತುಳಿದಿರುತ್ತಾರೆ, ಹಲ್ಲೆಯಿಂದ ಹಸನ್ ಬಾವಾ ಅವರು ಗಾಯಗೊಂಡಿದ್ದಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment