ಧರ್ಮಸ್ಥಳ, ಆಗಸ್ಟ್ 06, 2025 (ಕರಾವಳಿ ಟೈಮ್ಸ್) : ಧರ್ಮಸ್ಥಳದಲ್ಲಿ ಬುಧವಾರ ಸಂಜೆ ಬಳಿಕ ಹೈಡ್ರಾಮಾ ನಡೆದಿದ್ದು, ನಾಲ್ವರು ಯೂಟ್ಯೂಬರ್‍ಗಳ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ. ಪ್ರದೇಶದಲ್ಲಿ ಘಟನೆ ಬಳಿಕ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಹೆಚ್ಚುವರಿ ಪೊಲೀಸ್ ಬಲ ನಿಯೋಜಿಸಲಾಗಿದೆ.
ಯೂಟ್ಯೂಬ್ ವರದಿಗಾರರಾದ ಅಜಯ್ ಅಂಚನ್, ಅಭಿಷೇಕ್, ವಿಜಯ್ ಹಾಗೂ ಇನ್ನೋರ್ವ ವ್ಯಕ್ತಿ ಹಲ್ಲೆಗೊಳಗಾಗಿದ್ದಾರೆ ಎನ್ನಲಾಗುತ್ತಿದೆ. ಯೂಟ್ಯೂಬ್ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅವರ ವಾಹನವನ್ನು ಹಾನಿಗೊಳಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ವರದಿಗಾರರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಧರ್ಮಸ್ಥಳದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಸೇರಿದ್ದ ಜನರನ್ನು ಚದುರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯೂಟ್ಯೂಬರ್‍ಗಳ ಮೇಲೆ ನಡೆದ ಹಲ್ಲೆ ಮತ್ತು ಅವರುಗಳ ಎರಡು ವಾಹನಗಳಿಗೆ ಹಾನಿ ನಡೆಸಿದ ಬಗ್ಗೆ ಹಾಗೂ ಖಾಸಗಿ ನ್ಯೂಸ್ ಚಾನೆಲ್ ವರದಿಗಾರನ ಮೇಲೆ ನಡೆದ ಹಲ್ಲೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗುತ್ತಿದೆ.
ಧರ್ಮಸ್ಥಳ ಪಾಂಗಾಳದಲ್ಲಿ (ಲಾಠಿ ಚಾರ್ಜ್ ನಡೆದ ಸ್ಥಳದಲ್ಲಿ), ಧರ್ಮಸ್ಥಳ ಪೆÇಲೀಸ್ ಠಾಣಾ ಆವರಣದಲ್ಲಿ ಮತ್ತು ಆಸ್ಪತ್ರೆಯ ಮುಂದೆ ಕಾನೂನು ಬಾಹಿರ ಗುಂಪು ಸೇರಿರುವ ಬಗ್ಗೆಯೂ ಪ್ರಕರಣ ದಾಖಲಿಸಲಾಗುತ್ತಿದೆ.
ಹಲ್ಲೆಗೊಳಗಾದವರು ಚಿಕಿತ್ಸೆಗಾಗಿ ದಾಖಲಾಗಿರುವ ಆಸ್ಪತ್ರೆಯ ವೈದ್ಯರೊಂದಿಗೆ ವಿಚಾರಿಸಲಾಗಿದ್ದು, ಪ್ರಾಥಮಿಕ ಆರೋಗ್ಯ ತಪಾಸಣೆಯಲ್ಲಿ ಯಾವುದೇ ಗಂಭೀರ ಗಾಯಗಳಾಗಿರುವುದು ಕಂಡುಬಂದಿಲ್ಲ ಎಂಬುದಾಗಿ ಮೌಖಿಕವಾಗಿ ವೈದ್ಯರು ತಿಳಿಸಿದ್ದಾರೆ. ನಡೆದ ಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ್ದಾರೆ.
0 comments:
Post a Comment