ಮಂಗಳೂರು, ಆಗಸ್ಟ್ 23, 2025 (ಕರಾವಳಿ ಟೈಮ್ಸ್) : ಯಾವುದೇ ಸಮಸ್ಯೆಗಳಿಲ್ಲದ ಉತ್ತಮ ಸಮಾಜ ರೂಪುಗೊಳ್ಳಲು ಪ್ರತಿಯೊಬ್ಬ ನಾಗರೀಕರು ಅಗತ್ಯ ಕಾನೂನು ಮಾಹಿತಿ ಹೊಂದಿರಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಹೇಳಿದರು.
ನಗರದ ಬಲ್ಮಠ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಉಲ್ಲಂಘನೆಯ ಪರಿಣಾಮವನ್ನು ಅರಿತರೆ, ನಾವು ಯಾವುದೇ ಸಮಸ್ಯೆ ಉಂಟು ಮಾಡಲು ಸಾಧ್ಯವಿಲ್ಲ. ಇದರಿಂದ ಸಮಾಜವೂ ಸುಧಾರಣೆಗೊಂಡು, ನಾಗರೀಕರು ನೆಮ್ಮದಿಯಿಂದ ಬದುಕಬಹುದು ಎಂದರು.
ಖಾಯಂ ಜನತಾ ನ್ಯಾಯಾಲಯದ ಕುರಿತು ನ್ಯಾಯವಾದಿ ಫಝ್ಲುಲ್ ರಹಮಾನ್, “ಮೂಲಭೂತ ಹಕ್ಕುಗಳು ಮತ್ತು ಮಧ್ಯಸ್ಥಿಕೆ” ಕುರಿತು ಸಹಾಯಕ ಕಾನೂನು ಅಭಿರಕ್ಷಕಿ ಸುಪ್ರಿತಾ ಹಾಗೂ “ಮೂಲಭೂತ ಕರ್ತವ್ಯಗಳು ಮತ್ತು ಲೋಕ ಅದಾಲತ್” ಕುರಿತು ಸಹಾಯಕ ಕಾನೂನು ಅಭಿರಕ್ಷಕಿ ಅಶ್ವಿನಿ ಮಾತನಾಡಿದರು. ಕಾಲೇಜು ಪ್ರಾಂಶುಪಾಲೆ ವನಿತಾ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕಿ ಯಶೋಧಾ ಉಪಸ್ಥಿತರಿದ್ದರು.
0 comments:
Post a Comment