ಜಮೀನಿನ ಪೌತಿ ಖಾತೆ ಮಾಡಲು ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಡಿಟಿ ರಾಜೇಶ್, ಕೇಸ್ ವರ್ಕರ್ ಸಂತೋಷ್ ಹಾಗೂ ಬ್ರೋಕರ್ ಗಣೇಶ್ ವಾಮದಪದವು - Karavali Times ಜಮೀನಿನ ಪೌತಿ ಖಾತೆ ಮಾಡಲು ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಡಿಟಿ ರಾಜೇಶ್, ಕೇಸ್ ವರ್ಕರ್ ಸಂತೋಷ್ ಹಾಗೂ ಬ್ರೋಕರ್ ಗಣೇಶ್ ವಾಮದಪದವು - Karavali Times

728x90

13 August 2025

ಜಮೀನಿನ ಪೌತಿ ಖಾತೆ ಮಾಡಲು ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಡಿಟಿ ರಾಜೇಶ್, ಕೇಸ್ ವರ್ಕರ್ ಸಂತೋಷ್ ಹಾಗೂ ಬ್ರೋಕರ್ ಗಣೇಶ್ ವಾಮದಪದವು

 ಬಂಟ್ವಾಳ, ಆಗಸ್ಟ್ 13, 2025 (ಕರಾವಳಿ ಟೈಮ್ಸ್) : ಜಮೀನಿನ ಪೌತಿ ಖಾತೆ ಮಾಡಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಜೊತೆ ಲಂಚಕ್ಕೆ ಬೇಡಿಕೆಯಿಟ್ಟ ಬಗ್ಗೆ ದೂರಿನಂತೆ ಬುಧವಾರ ಅಪರಾಹ್ನ ಬಂಟ್ವಾಳ ತಾಲೂಕು ಕಚೇರಿಗೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮೂವರನ್ನು ರೆಡ್ ಹ್ಯಾಂಡಾಗಿ ಬಲೆಗೆ ಕೆಡವಿದ್ದಾರೆ. 

ತಾಲೂಕು ಕಚೇರಿಯ ಕಂದಾಯ ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಕೇಸ್ ವರ್ಕರ್ ಸಂತೋಷ್ ಹಾಗೂ ಬ್ರೋಕರ್ ಗಣೇಶ್ ವಾಮದಪದವು ಅವರೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮಿಕಗಳು. 

ಸಜಿಪಮುನ್ನೂರು ಗ್ರಾಮದ ನಿವಾಸಿ ದೂರುದಾರ ತನ್ನ ತಾಯಿಯ ಪೌತಿ ಖಾತೆಯ ವಿಚಾರವಾಗಿ 2021ನೇ ಇಸವಿಯಲ್ಲಿ ಬಂಟ್ವಾಳ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಾದ-ಪ್ರತಿವಾದ ನಡೆದು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಜಮೀನು ಮಂಜೂರಾತಿ ಆದೇಶವನ್ನು ಪುರಸ್ಕರಿಸಿದ್ದು, ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶದಂತೆ ಸಹಾಯಕ ಆಯುಕ್ತರ ನ್ಯಾಯಾಲಯ ಸಜಿಪಮನ್ನೂರು ಗ್ರಾಮದ ಸರ್ವೆ ನಂಬ್ರ 102/1 ರಲ್ಲಿ ಅರ್ಜಿದಾರರ ಪೌತಿ ಖಾತೆ ಮಾಡಿಕೊಡಲು ಬಂಟ್ವಾಳ ತಹಶೀಲ್ದಾರರಿಗೆ ಆದೇಶ ನೀಡಿತ್ತು. 

ಆದರೆ ಸದ್ರಿ ಕಡತವನ್ನು ಬಂಟ್ವಾಳ ತಹಶೀಲ್ದಾರ್ ಕಚೇರಿಯಲ್ಲಿ ಬಾಕಿ ಇರಿಸಿಕೊಳ್ಳಲಾಗಿದ್ದು, ಈ ಬಗ್ಗೆ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಹಾಗೂ ಕೇಸ್ ವರ್ಕರ್ ಸಂತೋಷ್ ಅವರಲ್ಲಿ ವಿಚಾರಿಸಿದಾಗ ಪೌತಿ ಖಾತೆ ಕೆಲಸದ ಕೇಸ್ ವರ್ಕರ್ ಸಂತೋಷ್ ಒಂದೂವರೆ ಸಾವಿರ ರೂಪಾಯಿ ಹಾಗೂ ಉಪತಹಶೀಲ್ದಾರ್ ರಾಜೇಶ ನಾಯ್ಕ ಪೌತಿ ಖಾತೆ ಮಾಡಿಕೊಡಲು 20 ಸಾವಿರ ರೂಪಾಯಿ ಮೊತ್ತದ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. 

ಈ ಬಗ್ಗೆ ಅರ್ಜಿದಾರರು ಸಾಕ್ಷಿ ಪುರಾವೆಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಡಿಟಿ ರಾಜೇಶ ನಾಯ್ಕ ಹಾಗೂ ಕೇಸ್ ವರ್ಕರ್ ಸಂತೋಷ್ ವಿರುದ್ದ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಬುಧವಾರ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಅವರು ಬ್ರೋಕರ್ ಗಣೇಶ್ ವಾಮಪದವು ಅವರ ಮೂಲಕ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ದಾಳಿ ನಡೆಸಿದ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ನೇತೃತ್ವದ ಅಧಿಕಾರಿಗಳು ಆರೋಪಿಗಳನ್ನು ಬಲೆಗೆ ಕೆಡವಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಟಿ ರಾಜೇಶ್ ನಾಯ್ಕ್ ಅವರು ತಹಶೀಲ್ದಾರ್ ಅವರಿಗೆ ಹಣ ನೀಡಬೇಕಾಗಿದೆ ಎಂದು ತಿಳಿಸಿರುವ ಹಿನ್ನಲೆಯಲ್ಲಿ ಈ ಬಗ್ಗೆ ತಹಶೀಲ್ದಾರ್ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾ ಎಸ್ಪಿ ಕುಮಾರಚಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ದಾಳಿ ನಡೆದ ಹಿನ್ನಲೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ರಾಜು ಅವರು ಸ್ಥಳಕ್ಕೆ ಧಾವಿಸಿದ್ದಾರೆ. ದಾಳಿ ನಡೆಸಿದ ತಂಡದಲ್ಲಿ ಡಿವೈಎಸ್ಪಿಗಳಾದ ಡಾ ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಇನ್ಸ್ ಪೆಕ್ಟರ್ ಗಳಾದ ಭಾರತಿ ಬಿ, ಚಂದ್ರಶೇಖರ್ ಕೆ ಎನ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಜಮೀನಿನ ಪೌತಿ ಖಾತೆ ಮಾಡಲು ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಡಿಟಿ ರಾಜೇಶ್, ಕೇಸ್ ವರ್ಕರ್ ಸಂತೋಷ್ ಹಾಗೂ ಬ್ರೋಕರ್ ಗಣೇಶ್ ವಾಮದಪದವು Rating: 5 Reviewed By: karavali Times
Scroll to Top