ಬಂಟ್ವಾಳ, ಆಗಸ್ಟ್ 02, 2025 (ಕರಾವಳಿ ಟೈಮ್ಸ್) : ದನಕ್ಕೆ ಡಿಕ್ಕಿ ಹೊಡೆದ ಬೈಕೊಂದು ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದು ಜಾರಿಕೊಂಡು ಹೋಗಿ ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿ ಸಂಚರಿಸುತ್ತಿದ್ದ ಸಹಸವಾರ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪಿಲಾತಬೆಟ್ಟು ಗ್ರಾಮದ ಪೂಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಜುಲೈ 31 ರಂದು ಸಂಭವಿಸಿದೆ.
ಮೃತ ಸಹಸವಾರನನ್ನು ಸ್ಥಳೀಯ ನಿವಾಸಿ ಜನಾರ್ದನ (50) ಎಂದು ಹೆಸರಿಸಲಾಗಿದೆ. ಜುಲೈ 31 ರಂದು ಬೆಳಿಗ್ಗೆ ಸುಮಾರು 9.30 ರ ವೇಳೆಗೆ ಘಟನೆ ಸಂಭವಿಸಿದ್ದು, ಸತೀಶ್ ಎಂಬವರು ಬಂಟ್ವಾಳ ಕಡೆಯಿಂದ ಚಲಾಯಿಸಿಕೊಂಡು ಬಂದ ಬೈಕ್ ರಸ್ತೆ ದಾಟುತ್ತಿದ್ದ ದನಕ್ಕೆ ಡಿಕ್ಕಿ ಹೊಡೆದು ಬೈಕ್ ಸಮೇತ ರಸ್ತೆಗೆ ಉರುಳಿ ಬಿದ್ದದ್ದಲ್ಲದೆ ಆತನ ಬೈಕ್ ಜಾರಿಕೊಂಡು ಹೋಗಿ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಶಿವರಾಜ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಶಿವರಾಜ್ ಅವರ ಬೈಕಿನಲ್ಲಿ ಸಹಸವಾರರಾಗಿದ್ದ ಜನಾರ್ದನ ಅವರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯ ವರ್ಕ್ ಶಾಪ್ ಮಾಲಕ, ಕುಕ್ಕಳ ಗ್ರಾಮದ ಪುಳಿಮಜಲು ನಿವಾಸಿ ಪುರುಷೋತ್ತಮ ಗೌಡ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment