ಬಂಟ್ವಾಳ, ಆಗಸ್ಟ್ 11, 2025 (ಕರಾವಳಿ ಟೈಮ್ಸ್) : ಮನೆ ಸಮೀಪದ ತೋಡಿನಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಜಮೀನಿನಲ್ಲಿ ದಾಸ್ತಾನಿರಿಸಿದ ಸ್ಥಳಕ್ಕೆ ಪೂಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕುಕ್ಕುಡಿ ಎಂಬಲ್ಲಿನ ನಿವಾಸಿ ವಿಶ್ವನಾಥ ಎಂಬವರು ಮನೆ ಸಮೀಪದ ತೋಡಿನಿಂದ ಅಕ್ರಮವಾಗಿ ಮರಳು ತೆಗೆದು ಅವರ ಜಾಗದಲ್ಲಿ ದಾಸ್ತಾನು ಇರಿಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪೂಂಜಾಲಕಟ್ಟೆ ಪಿಎಸ್ಸೈ ರಾಜೇಶ್ ಕೆ ವಿ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 3 ಸಾವಿರ ರೂಪಾಯಿ ಮೌಲ್ಯದ 2 ಟನ್ ನಷ್ಟು ಮರಳು ಹಾಗೂ ಮರಳನ್ನು ಸಂಗ್ರಹಿಸುವ ಕೃತ್ಯಕ್ಕೆ ಬಳಸುತ್ತಿದ್ದ ಪ್ಲಾಸ್ಟಿಕ್ ಬುಟ್ಟಿಗಳು, ಕಬ್ಬಿಣದ ಹಾರೆ, ಕಬ್ಬಿಣ ಮತ್ತು ಸ್ಟೀಲ್ ಬಕೆಟುಗಳು ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಶ್ವನಾಥ ಅವರು ತೋಡಿನಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಮಾರಾಟ ಮಾಡುವ ಉದ್ದೇಶಕ್ಕಾಗಿ ದಾಸ್ತಾನು ಇರಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment