ಬಂಟ್ವಾಳ, ಆಗಸ್ಟ್ 23, 2025 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆ ಎಂಬಲ್ಲಿ ಖಾಸಗಿ ಪ್ರೌಢಶಾಲೆ ಆವರಣದಲ್ಲಿ ಅಪಾಯಕಾರಿ ಮರವೊಂದು ಶಾಲಾ ಮಕ್ಕಳ ಸಹಿತ ಸಾರ್ವಜನಿಕರ ಪಾಲಿಗೆ ಆತಂಕದ ಪರಿಸ್ಥಿತಿ ನಿರ್ಮಿಸಿದೆ.
ಮರದ ರೆಂಬೆ-ಕೊಂಬೆಗಳು ಪರಿಸರದಲ್ಲಿ ಹರಡಿದ್ದು, ಶಾಲಾ ಕಟ್ಟಡದ ಮಾಡು, ಪರಿಸರದ ಪುರಸಭಾ ಕಟ್ಟಡ ಸಹಿತ ಶಾಲಾ ವಿದ್ಯಾರ್ಥಿಗಳು ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನ, ಸಾರ್ವಜನಿಕರ ಮೇಲೆ ಮುರಿದು ಬೀಳುವ ಅಪಾಯ ಎದುರಾಗಿದೆ. ಮರದ ಕೊಂಬೆಗಳು ವಾಲಿಕೊಂಡಿರುವ ಪರಿಸರದಲ್ಲೇ ನಿತ್ಯವೂ ವಿದ್ಯಾರ್ಥಿಗಳ ಓಡಾಟ ಇದ್ದು, ಮಳೆ-ಗಾಳಿಗೆ ಮರದ ಕೊಂಬೆಗಳು ಮುರಿದು ಬಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಶಾಲಾಡಳಿತ ಮಂಡಳಿ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಪುರಸಭಾಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರ್ ಅವರಿಗೂ ಮನವಿ ಸಲ್ಲಿಸಿದರೂ ಈ ಬಗ್ಗೆ ಇನ್ನೂ ಕೂಡಾ ಯಾರೂ ಗಮನ ಹರಿಸದೆ ಇರುವ ಪರಿಣಾಮ ಅಪಾಯದ ಕರೆಗಂಟೆ ಮುಂದುವರಿದಿದೆ. ಮಳೆ ಬಿರುಸು ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಗಳು ಮುಂದುವರಿದಿರುವ ಹಿನ್ನಲೆಯಲ್ಲಿ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment