ತಲಪಾಡಿಯಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ಐವರ ಸಹಿತ ಆರು ಮಂದಿ ದಾರುಣ ಮೃತ್ಯು - Karavali Times ತಲಪಾಡಿಯಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ಐವರ ಸಹಿತ ಆರು ಮಂದಿ ದಾರುಣ ಮೃತ್ಯು - Karavali Times

728x90

28 August 2025

ತಲಪಾಡಿಯಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ಐವರ ಸಹಿತ ಆರು ಮಂದಿ ದಾರುಣ ಮೃತ್ಯು

ಮಂಗಳೂರು, ಆಗಸ್ಟ್ 28, 2025 (ಕರಾವಳಿ ಟೈಮ್ಸ್) : ಸರಕಾರಿ ಬಸ್ ಚಾಲಕನ ನಿಯಂತ್ರಣ ಮೀರಿ ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಐದು ಮಂದಿ ಸಹಿತ ಒಟ್ಟು 6 ಮಂದಿ ದಾರುಣವಾಗಿ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ತಲಪಾಡಿ ಎಂಬಲ್ಲಿ ಗುರುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. 

ಮೃತರನ್ನು ಕೆ ಸಿ ರೋಡು ಸಮೀಪದ ಅಜ್ಜಿನಡ್ಕ-ಮುಳ್ಳುಗುಡ್ಡೆ ನಿವಾಸಿ ಪೊಡಿಯಬ್ಬ ಎಂಬವರ ಪುತ್ರ, ಅಟೋ ರಿಕ್ಷಾ ಚಾಲಕ ಹೈದರ್ ಅಲಿ (47). ಫರಂಗಿಪೇಟೆ ನಿವಾಸಿ ಅಬ್ದುಲ್ ಖಾದರ್ ಎಂಬವರ ಪತ್ನಿ ಅವ್ವಮ್ಮ  (72), ಅಜ್ಜಿನಡ್ಕ ನಿವಾಸಿಗಳಾದ ಮೊಯಿದಿನ್ ಕುಂಞÂ ಎಂಬವರ ಮಗಳು ಖದೀಜಾ ಅಜ್ಜಿನಡ್ಕ (67), ಶಾಹುಲ್ ಹಮೀದ್ ಎಂಬವರ ಪುತ್ರಿ ಹಸ್ನಾ (11), ಮುಹಮ್ಮದ್ ಎಂಬವರ ಪತ್ನಿ ನಫೀಸಾ (52), ಮುಹಮ್ಮದ್ ಎಂಬವರ ಪುತ್ರಿ ಆಯಿಷಾ ಫಿದಾ (19) ಎಂದು ಹೆಸರಿಸಲಾಗಿದೆ. ಗಾಯಗೊಂಡವರನ್ನು ಕಾಸರಗೋಡು ನಿವಾಸಿಗಳಾದ ಲಕ್ಷ್ಮಿ (61) ಹಾಗೂ ಅವರ ಪುತ್ರ ಸುರೇಂದ್ರ (39) ಎಂದು ಗುರುತಿಸಲಾಗಿದೆ. 

ಮಧ್ಯಾಹ್ನ ಸುಮಾರು 1.30 ರ ವೇಳೆಗೆ ಘಟನೆ ಸಂಭವಿಸಿದೆ. ಕೆ ಸಿ ರೋಡಿನಿಂದ ಅಟೋ ರಿಕ್ಷಾದಲ್ಲಿ ತೆರಳಿದ್ದ ಕುಟುಂಬ ತಲಪಾಡಿ ಬಳಿ ನಿಂತಿದ್ದ ವೇಳೆ ಯಮರೂಪವಾಗಿ ಬಂದ ಸರಕಾರಿ ಬಸ್ಸು ಡಿಕ್ಕಿ ಹೊಡೆದು ಈ ಭೀಕರ ದುರಂತ ಸಂಭವಿಸಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಾರಿಗೆ ಇಲಾಖೆ ವಿಷಾದ 

ತಲಪಾಡಿ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ ಎಸ್ ಆರ್ ಟಿ ಸಿ ) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಆಗಸ್ಟ್ 28 ರಂದು ಮಂಗಳೂರು ವಿಭಾಗದ 1ನೇ ಘಟಕದ ವಾಹನ ಸಂಖ್ಯೆ : ಕೆಎ19 ಎಫ್3407 ನೋಂದಣಿ ಸಂಖ್ಯೆಯ ಮಾರ್ಗ ಸಂಖ್ಯೆ 129/130 ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ಚಾಲಕರಾಗಿ ನಿಜಲಿಂಗಪ್ಪ ಚಲವಾದಿ (ಬಿಲ್ಲೆ ಸಂಖ್ಯೆ 309) ಅವರು ಕರ್ತವ್ಯ ನಿರ್ವಹಿಸುವಾಗ ಮಧ್ಯಾಹ್ನ ಸಮಯ ಸುಮಾರು 12.30-1235 ರ ವೇಳೆಗೆ ಕಾಸರಗೋಡಿನಿಂದ ನಿರ್ಗಮಿಸಿ ಸಮಯ 1:45ಕ್ಕೆ ತಲಪಾಡಿ ಟೋಲ್ ಗಿಂತ 150 ಮೀಟರ್ ಹಿಂದಕ್ಕೆ ನಿಗಮದ ಚಾಲಕರು ತಮ್ಮ ವಾಹನವನ್ನು ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬರುವ ಸಮಯದಲ್ಲಿ ಏಕಾ ಏಕಿ ರಸ್ತೆಗೆ ಅಡ್ಡ ಬಂದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನಕ್ಕೆ ಬ್ರೇಕ್ ಹಾಕಿದ್ದು, ಅಷ್ಟರಲ್ಲಿ ನಿಗಮದ ವಾಹನ ಆಟೋ ರಿಕ್ಷಾಕ್ಕೆ ಮಾರಣಾಂತಿಕ ಡಿಕ್ಕಿಯಾಗಿದೆ. ಆ ಸಂದರ್ಭ ನಿಗಮದ ವಾಹನವು ಡಿಕ್ಕಿಯಾಗಿ ಹಠಾತ್ತನೆ ಸ್ಕಿಡ್ ಆಗಿ ತಿರುಗಿ ನಿಂತಿದ್ದು, ಚಾಲಕರು ಚಾಲನಾ ಸೀಟಿನಿಂದ ಓಡಿ ಹೋಗಿದ್ದಾರೆ. ವಾಹನವು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿಯಾಗಿ ನಿಂತಿದೆ. 

ಸದರಿ ಅಪಘಾತದಲ್ಲಿ ಮುಂದಿನಿಂದ ಡಿಕ್ಕಿ ಹೊಡೆದ ಅಟೋದಲ್ಲಿ 2 ಜನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದ ಆಟೋ ಚಾಲಕ ಸೇರಿ 4 ಜನ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಹಿಂಬದಿಯಿಂದ ಡಿಕ್ಕಿಯಾಗಿದ್ದ 2 ಜನ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸದ್ರಿ ವಾಹನವನ್ನು ಆಗಸ್ಟ್ 27 ರಂದು ಮಾರ್ಗ ಸಂಖ್ಯೆಗೆ ನಿಯೋಜಿಸಿದ್ದು ಅಪಘಾತ ಸಮಯದವರೆಗೆ 10 ಸುತ್ತುವಳಿಯಲ್ಲಿ ಒಟ್ಟಾರೆ 540 ಕಿಮೀ ಕ್ರಮಿಸಿರುತ್ತದೆ. ಅಲ್ಲದೇ ಈ ವಾಹನವು ಆಗಸ್ಟ್ 26 ರಂದು ಎಫ್ ಸಿ ನವೀಕರಣ ಆಗಿ ಬಂದಿದ್ದು, ಯಾವುದೇ ತಾಂತ್ರಿಕ ದೋಷದಿಂದ ಸಂಭವಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ ಸದರಿ ಚಾಲಕ ಸುಮಾರು 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಮಾರ್ಗದಲ್ಲಿಯೇ ಸುಮಾರು 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಚಾಲಕರ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ. ಗಾಯಗೊಂಡ ಇತರೆ ಸಾರ್ವಜನಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ. ನಿಗಮವು ಈ ಅಪಘಾತಕ್ಕೆ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ. ಅಪಘಾತ ತಪ್ಪಿಸಲು ನಿರಂತರ ತರಬೇತಿ, ತಿಳುವಳಿಕೆ ಮತ್ತು ಜಾಗೃತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾಗ್ಯೂ ಸಹ, ಈ ರೀತಿಯ ಅಪಘಾತಗಳು ಸಂಭವಿಸಿರುವುದು ಅತ್ಯಂತ ದುಃಖಕರ, ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕಲ್ಪಿಸಲಿ ಎಂದು ಕೋರುತ್ತಾ, ತಪ್ಪಿತಸ್ಥ ಚಾಲಕನ ಮೇಲೆ ವಿಚಾರಣೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ತಲಪಾಡಿಯಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ಐವರ ಸಹಿತ ಆರು ಮಂದಿ ದಾರುಣ ಮೃತ್ಯು Rating: 5 Reviewed By: karavali Times
Scroll to Top