ಪುತ್ತೂರು, ಆಗಸ್ಟ್ 28, 2025 (ಕರಾವಳಿ ಟೈಮ್ಸ್) : ಜಮೀನು ಪರಾಭಾರೆಗೆ ನಿರಾಕ್ಷೇಪಣಾ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟ ಪುತ್ತೂರು ತಾಲೂಕು ಕಚೇರಿಯ ಭೂಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನಿಲ್ ಎಂಬಾತ ಗುರುವಾರ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಇತ್ತೀಚೆಗಷ್ಟೆ ಬಂಟ್ವಾಳ ತಾಲೂಕು ಕಚೇರಿಯ ಡಿಟಿ ಸಹಿತ ಮೂವರು ಲಂಚ ಪಡೆದುಕೊಳ್ಳುವ ವೇಳೆ ಲೋಕಾ ಪೊಲೀಸರ ಬಲೆ ಬಿದ್ದ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಇದೀಗ ಪುತ್ತೂರು ತಾಲೂಕು ಕಚೇರಿಯಲ್ಲೂ ಲಂಚಾವತಾರ ಬೆಳಕಿಗೆ ಬಂದಿದೆ.
ದೂರುದಾರರ ಚಿಕ್ಕಪ್ಪನವರಿಗೆ ಪುತ್ತೂರು ತಾಲೂಕು ನೆಟ್ಟಣಿಗೆ ಮುಡೂರು ಗ್ರಾಮದಲ್ಲಿ 65 ಸೆಂಟ್ಸ್ ಜಮೀನು ಅಕ್ರಮ-ಸಕ್ರಮದನ್ವಯ ದರ್ಖಾಸ್ತು ಮಂಜೂರಾಗಿದ್ದು, ದೂರುದಾರರ ಚಿಕ್ಕಪ್ಪನವರಿಗೆ ಅನಾರೋಗ್ಯ ಇದ್ದುದರಿಂದ ಅವರು ತನ್ನ ಸ್ವ-ಇಚ್ಛೆಯಿಂದ ಉಪ ನೋಂದಣಾಧಿಕಾರಿ ಕಛೇರಿ, ಪುತ್ತೂರು ಇಲ್ಲಿ ವೀಲುನಾಮೆ ಯಾನೆ ಮರಣ ಶಾಸನ ಬರೆಸಿ ಕೊಟ್ಟಿರುತ್ತಾರೆ. ಇದರ ಪ್ರಕಾರ ಅವರ ಚಿಕ್ಕಪ್ಪನ ಮರಣ ನಂತರ ಸದ್ರಿ ಜಮೀನಿನ ಸಂಪೂರ್ಣ ಹಕ್ಕು ದೂರುದಾರರಿಗೆ ಸೇರಿರುತ್ತದೆ. ಸದ್ರಿ ಜಮೀನು ದೂರುದಾರರ ಚಿಕ್ಕಪ್ಪನವರಿಗೆ ಮಂಜೂರಾಗಿ 27 ವರ್ಷ ಆಗಿರುತ್ತದೆ. ಸದರಿ ಜಮೀನನ್ನು ಪರಭಾರೆ ಮಾಡಲು ಪುತ್ತೂರು ತಹಶೀಲ್ದಾರ್ ಅವರಿಂದ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇದ್ದುದರಿಂದ ದೂರುದಾರರ ಚಿಕ್ಕಪ್ಪನವರು 2024 ರ ಡಿಸೆಂಬರ್ ತಿಂಗಳಲ್ಲಿ ಪುತ್ತೂರು ತಹಶೀಲ್ದಾರರಿಗೆ ಸಾಗುವಳಿ ಚೀಟಿ ಮೂಲಕ ತಹಶೀಲ್ದಾರರಿಂದ ಮಂಜೂರಾದ ಜಾಗ ಮಾರಾಟ ಮಾಡುವರೇ ನಿರಾಕ್ಷೇಪಣಾ ಪತ್ರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.
ಇದುವರೆಗೆ ನಿರಾಕ್ಷೇಪಣಾ ಪತ್ರ ಸಿಗದೆ ಇದ್ದು, ಸದ್ರಿ ಅರ್ಜಿಯ ಬಗ್ಗೆ ವಿಚಾರಿಸಲು ದೂರುದಾರರ ಚಿಕ್ಕಪ್ಪನವರು ದೂರುದಾರರಿಗೆ ಹೇಳಿದ್ದು, ಈ ಬಗ್ಗೆ ದೂರುದಾರರು ಜೂನ್ 26 ರಂದು ಪುತ್ತೂರು ತಹಶೀಲ್ದಾರ್ ಕಛೇರಿಯ ಭೂ ಸುಧಾರಣಾ ಶಾಖೆಗೆ ಹೋಗಿ ಕೇಸ್ ವರ್ಕರ್ ಸುನಿಲ್ ಅವರಲ್ಲಿ ತನ್ನ ಚಿಕ್ಕಪ್ಪ ಸಲ್ಲಿಸಿದ ನಿರಾಕ್ಷೇಪಣಾ ಪತ್ರದ ಬಗ್ಗೆ ವಿಚಾರಿಸಿದಾಗ ಕೇಸ್ ವರ್ಕರ್ ಸುನಿಲ್ ಅವರು ತಹಶೀಲ್ದಾರ್ ಅವರ ಸಹಿಗೆ ಬಾಕಿ ಇದೆ. ಅದಕ್ಕೆ ಸ್ವಲ್ಪ ಹಣ ಖರ್ಚು ಇರುತ್ತದೆ. ತಹಶೀಲ್ದಾರರಿಗೆ 10 ಸಾವಿರ ರೂಪಾಯಿ ಕೊಡಬೇಕಾಗುತ್ತದೆ. ಮತ್ತೆ ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೆÇಲೀಸ್ ಠಾಣೆಯಲ್ಲಿ ಕೇಸ್ ವರ್ಕರ್ ಸುನಿಲ್, ತಹಶೀಲ್ದಾರ್ ಹಾಗೂ ತಹಶೀಲ್ದಾರ್ ಅವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಗುರುವಾರ (ಆಗಸ್ಟ್ 28) ಕೇಸ್ ವರ್ಕರ್ ಸುನಿಲ್ ಅವರು ದೂರುದಾರರಿಂದ 12 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೆÇಲೀಸರ ಬಲೆಗೆ ಬಿದ್ದಿದ್ದಾರೆ. ಕೇಸ್ ವರ್ಕರ್ ಸುನಿಲ್ ಎಂಬಾತನನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಪುತ್ತೂರು ತಾಲೂಕು ತಹಶೀಲ್ದಾರರ ಪಾತ್ರದ ಕುರಿತು ಕೂಡಾ ತನಿಖೆ ನಡೆಸಲಾಗುವುದು. ಸದ್ಯ ಪುತ್ತೂರು ತಹಶೀಲ್ದಾರ್ ಅವರು ತಲೆಮರೆಸಿಕೊಂಡಿರುತ್ತಾರೆ ಎಂದು ಲೋಕಾಯುಕ್ತ ಎಸ್ಪಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಕುಮಾರಚಂದ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಡಾ. ಗಾನ ಪಿ ಕುಮಾರ್, ಇನ್ಸ್ ಪೆಕ್ಟರ್ ಗಳಾದ ಶ್ರೀಮತಿ ಭಾರತಿ ಜಿ, ಚಂದ್ರಶೇಖರ್ ಕೆ.ಎನ್, ರವಿ ಪವಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
0 comments:
Post a Comment