ಬಂಟ್ವಾಳ, ಆಗಸ್ಟ್ 03, 2025 (ಕರಾವಳಿ ಟೈಮ್ಸ್) : ವ್ಯಕ್ತಿಯೋರ್ವರಿಗೆ ಪರಿಯಸ್ಥರೇ ಆಗಿರುವ ನಾಲ್ವರ ತಂಡ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಘಟನೆ ಬಿ ಮೂಡ ಗ್ರಾಮದ ಶಾಂತಿಅಂಗಡಿ ಎಂಬಲ್ಲಿ ಜುಲೈ 31 ರಂದು ಸಂಭವಿಸಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದವರನ್ನು ಪರ್ಲಿಯಾ ನಿವಾಸಿ ಕೆ ಹೈದರ್ ಎಂಬವರ ಪುತ್ರ ಮುಹಮ್ಮದ್ ನಜೀಬ್ (23) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಪರಿಚಯಸ್ಥರೇ ಆಗಿರುವ ಬದ್ರುದ್ದೀನ್, ಮುಸ್ತಫಾ ಯಾನೆ ಸೋಡಾ, ನೌಫಲ್ ಹಾಗೂ ಮಹಮ್ಮದ್ ಸಫ್ವಾನ್ ಎಂದು ಗುರುತಿಸಲಾಗಿದೆ.
ಜುಲೈ 31 ರಂದು ರಾತ್ರಿ ಸುಮಾರು 11.20 ರ ವೇಳೆಗೆ ನಜೀಬ್ ಅವರು ಶಾಂತಿಯಂಗಡಿ ಎಂಬಲ್ಲಿರುವ ವೇಳೆ ಆರೋಪಿಗಳು ಬಳಿಗೆ ಬಂದು ಆರೋಪಿ ಬದ್ರುದ್ದೀನ್ ಎಂಬಾತ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ಬಗ್ಗೆ ನಜೀಬ್ ಪ್ರಶ್ನಿಸಿದಕ್ಕೆ ಆರೋಪಿ ಮಹಮ್ಮದ್ ಸಫ್ವಾನ್ ಎಂಬಾತ ಹೆಲ್ಮೆಟಿನಿಂದ ಕುತ್ತಿಗೆ ಮತ್ತು ಎದೆಗೆ ಹೊಡೆದಿದ್ದಾನೆ. ಬಳಿಕ ಮಹಮ್ಮದ್ ಮುಸ್ತಾಫನು ಆಯುಧದಿಂದ ಕಾಲಿಗೆ ಹೊಡೆದಿದ್ದಾನೆ. ಈ ಸಂದರ್ಭ ನಜೀಬ್ ಅವರ ಬೊಬ್ಬೆ ಕೇಳಿ ಅವರ ತಂದೆ ಸ್ಥಳಕ್ಕೆ ಬಂದಾಗ ಅಲ್ಲಿಯೇ ಇದ್ದ ಆರೋಪಿ ನೌಫಲ್ ಅವಾಚ್ಯ ಶಬ್ದಗಳಿಂದ ಬೈದು ನಜೀಬನ ಎಡಕಣ್ಣಿನ ಹಣೆಗೆ ಹೊಡೆದಿದ್ದಾನೆ. ಬಳಿಕ ಆರೋಪಿಗಳೆಲ್ಲರೂ ಸೇರಿ ನಜೀಬ್ ಹಾಗೂ ಅವರ ತಂದೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮಿಬ್ಬರನ್ನು ಜೀವಸಹಿತ ಬಿಡದೇ ಸಧ್ಯದಲ್ಲಿಯೇ ಮುಗಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಯೇ ನಿಲ್ಲಿಸಿದ್ದ ನಜೀಬ್ ಅವರ ವಾಹನವನ್ನು ಕಾಲಿನಿಂದ ತುಳಿದು ಅದರ ಎದುರಿನ ಹೆಡ್ ಲೈಟ್ ಮತ್ತು ಮಡ್ ಗಾರ್ಡ್ ಜಖಂಗೊಳಿಸಿದ್ದಾರೆ.
ಬಳಿಕ ಹಲ್ಲೆಗೊಳಗಾದ ನಜೀಬ್ ಅವರನ್ನು ಶಾಕೀರ್ ಮತ್ತು ನೌಶಾದ್ ಎಂಬವರು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿರುತ್ತಾರೆ ಎಂದು ನೀಡಲಾದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2025 ಕಲಂ 352, 115(2), 118, 351(2), 324(2) ಜೊತೆಗೆ 3(5) ಬಿ ಎನ್ ಎಸ್-2023ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment