ಅಕ್ಟೋಬರ್ 2 ರಂದು ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ, ತರಬೇತಿ ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮ - Karavali Times ಅಕ್ಟೋಬರ್ 2 ರಂದು ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ, ತರಬೇತಿ ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮ - Karavali Times

728x90

30 September 2025

ಅಕ್ಟೋಬರ್ 2 ರಂದು ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ, ತರಬೇತಿ ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮ

ಬಂಟ್ವಾಳ, ಸೆಪ್ಟೆಂಬರ್ 30, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಗಾಂಧಿ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ, ತರಬೇತಿ ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮವು ಅಕ್ಟೋಬರ್ 2 ರಂದು ಗುರುವಾರ ಅಪರಾಹ್ನ 2 ಗಂಟೆಗೆ ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರಲ್ಲಿ ನಡೆಯಲಿದೆ ಎಂದು ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಹೇಳಿದರು. 

ಮೆಲ್ಕಾರ್ ಗೋಲ್ಡನ್ ಸಿಟಿ ಕಾಂಪ್ಲೆಕ್ಸಿನ ಸಂಸ್ಥೆಯ ಕಛೇರಿಯಲ್ಲಿ ಮಂಗಳವಾರ ಸಂಜೆ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾದ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ನೂತನ ಜಿಲ್ಲಾಧ್ಯಕ್ಷ ಅಶ್ಫಾಕ್ ಅಹ್ಮದ್ ವಿದ್ಯಾರ್ಥಿ ವೇತನ ವಿತರಿಸುವರು. ಅತಿಥಿಗಳಾಗಿ ಕೆ ಎನ್ ಗಂಗಾಧರ ಆಳ್ವ, ಸಂಸ್ಥೆಯ ಅಜೀವ ಸದಸ್ಯರಾದ ಆರಿಫ್ ಕೆ, ಬಿ ಕೆ ಅಬ್ದುಲ್ಲಾ ಕುಂಞÂ ಹಾಜಿ ಬೈರಿಕಟ್ಟೆ, ಝುಬೈರ್ ಬುಳೇರಿಕಟ್ಟೆ, ಮಂಗಳೂರು ಎ ಜೆ ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯೆ ಡಾ ಹಸೀನಾ ಭಾಗವಹಿಸುವರು. ಉಪನ್ಯಾಸಕ ಹಾಗೂ ರಾಜ್ಯ ಮಟ್ಟದ ತರಬೇತುದಾರ ಅಬ್ದುಲ್ ರಝಾಕ್ ಅನಂತಾಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು ಎಂದರು.

ಸುಮಾರು 50 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಗಾಂಧಿ ಜಯಂತಿ ಪ್ರಯುಕ್ತ ಆಹ್ವಾನಿತ ವಿದ್ಯಾರ್ಥಿಗಳಿಗೆ ಗಾಂಧೀಜಿ ಬದುಕು ಆಧರಿಸಿದ ರಸ ಪ್ರಶ್ನೆ ಕಾರ್ಯಕ್ರಮ, ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದ ಅಬ್ಬಾಸ್ ಅಲಿ, ಇದೇ ವೇಳೆ ಕೈಯಲ್ಲಿ ಪೂರ್ತಿ ಕುರ್ ಆನ್ ಬರೆದು ಸಾಧನೆ ಮಾಡಿರುವ ವಿದ್ಯಾರ್ಥಿನಿಯರಾದ ಸಜ್ಲ ಇಸ್ಮಾಯಿಲ್ ಹಾಗೂ ಫಾತಿಮತ್ ಅಬೀರ ಅವರನ್ನು ಸನ್ಮಾನಿಸಲಾಗುವುದು ಎಂದರು. 

ಜಮೀಯ್ಯತುಲ್ ಫಲಾಹ್ ಸಂಸ್ಥೆಯು 1988 ರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಕೇಂದ್ರೀಕರಿಸಿ ಮಂಗಳೂರಿನಲ್ಲಿ ಸ್ಥಾಪನೆಯಾದ ಜಿಲ್ಲೆಯ ಸಮಾಜ ಸೇವಾ ಸಂಸ್ಥೆಯಾಗಿದ್ದು, ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ನಿರಂತರವಾಗಿ ಪ್ರತಿ ವರ್ಷ ಶೈಕ್ಷಣಿಕ ಪ್ರೇರಣೆ ನೀಡುತ್ತಾ ಬಂದಿದೆ. ಹೆಣ್ಣು ಮಕ್ಕಳ ಶಿಕ್ಷಣ ಜಾಗೃತಿ, ಶಾಲೆ ಬಿಟ್ಟ ಮಕ್ಕಳಿಗೆ ಮರಳಿ ಬಾ ಶಾಲೆಗೆ ಕಾರ್ಯಕ್ರಮ, ಸರ್ವ ಶಿಕ್ಷಣ ಅಭಿಯಾನದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕಾರ, ವರದಕ್ಷಿಣೆ ವಿರುದ್ಧ ಜಾಗೃತಿ ಮೊದಲಾದ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಂಡು ಬಂದಿದೆ ಎಂದ ಅಬ್ಬಾಸ್ ಅಲಿ ಮಂಗಳೂರು-ಕಂಕನಾಡಿಯಲ್ಲಿ ಸಂಸ್ಥೆಯ ಸುಸಜ್ಜಿತ ಕಛೇರಿ, ಸಮುದಾಯ ಭವನ, ವಿದ್ಯಾರ್ಥಿನಿಲಯ ಕಾರ್ಯಾಚರಿಸುತ್ತಿದೆ. ಉಳ್ಳಾಲ ತಾಲೂಕಿನ ಅಡ್ಕರೆಪಡ್ಪು ಎಂಬಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜನ್ನು ಸಂಸ್ಥೆಯ ವತಿಯಿಂದ ಸ್ಥಾಪಿಸಿ ನಡೆಸುತ್ತಾ ಬರಲಾಗುತ್ತಿದೆ ಎಂದರು. 

ಬಂಟ್ವಾಳ ತಾಲೂಕು ಘಟಕ ಕೂಡಾ 1988ರಲ್ಲಿ ಸ್ಥಾಪನೆಯಾಗಿದ್ದು, ನಿರಂತರ ಶೈಕ್ಷಣಿಕ, ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ನಿರಂತರ ವರ್ಷಗಳಲ್ಲಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದು ಕ್ರಿಯಾಶೀಲ ಘಟಕವಾಗಿ ಹೊರಹೊಮ್ಮಿದೆ. ಈ ಸಾಲಿನಲ್ಲಿ ಸ್ವಂತ ಸುಸಜ್ಜಿತ ಕಛೇರಿಯನ್ನು ಹೊಂದಿದೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪೂರ್ವಾದ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಹಾಲಿ ಕಾರ್ಯದರ್ಶಿ ಹಕೀಂ ಕಲಾಯಿ, ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಜೊತೆಗಿದ್ದರು. 



  • Blogger Comments
  • Facebook Comments

0 comments:

Post a Comment

Item Reviewed: ಅಕ್ಟೋಬರ್ 2 ರಂದು ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ, ತರಬೇತಿ ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮ Rating: 5 Reviewed By: karavali Times
Scroll to Top