ಬಂಟ್ವಾಳ, ಸೆಪ್ಟೆಂಬರ್ 20, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿರುವ ಪೊಲೀಸರು ತಾಲೂಕಿನ ತುಂಬೆ ಬಳಿ ಆಗಸ್ಟ್ 14 ರಂದು ಜಾನುವಾರು ಕಳವು ನಡೆಸಿ ಮರುದಿನ ಅಲ್ಲೇ ಸಮೀಪ ದನದ ಅಂಗಾಂಗಳು ಪತ್ತೆಯಾದ ಪ್ರಕರಣದ ಆರೋಪಿಗಳ ವಿರುದ್ದ ಸಂಘಟಿತ ಅಪರಾಧ ತಡೆ ಕಾಯ್ದೆ (ಕೆ-ಕೋಕಾ ಆಕ್ಟ್) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ತುಂಬೆ ಬಳಿ ಆ 14 ರಂದು ಜಾನುವಾರು ಕಳವು ಹಾಗೂ ಅದರ ಅಂಗಾಗಗಳು ಮರುದಿನ ಅಂದರೆ ಆಗಸ್ಟ್ 15 ರಂದು ಅಲ್ಲೆ ಸಮೀಪದಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಉಳ್ಳಾಲ-ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು-ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48) ಹಾಗೂ ಮಂಗಳೂರು-ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಎಂಬವರನ್ನು ಸೆ 5 ರಂದು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಸದ್ರಿ ಆರೋಪಿಗಳು ಸೆ 4 ರಂದು ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲೂ ಆರೋಪಿಗಳಾಗಿರುವ ಹಿನ್ನಲೆಯಲ್ಲಿ ಆರೋಪಿಗಳ ಮೇಲೆ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಝ್ಡ್ ಕ್ರೈಂ ಆಕ್ಟ್-2000 - ಕೆ-ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅಪರಾಧ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ 2ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಈ ಹಿಂದೆಯೇ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಎಸ್ಪಿ ಅವರುಗಳು ಜಂಟಿಯಾಗಿ ಘೋಷಿಸಿ ಕ್ರಿಮಿನಲ್ ಗಳಿಗೆ ಎಚ್ಚರಿಸಿದ್ದರು ಎಂಬುದು ಈ ಸಂದರ್ಭ ಸ್ಮರಿಸಬಹುದು.
0 comments:
Post a Comment