ಬಂಟ್ವಾಳ, ಸೆಪ್ಟೆಂಬರ್ 18, 2025 (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸರಕಾರ ಈ ಬಾರಿ ಪ್ರೌಢಶಾಲೆಯಾಗಿ ಉನ್ನತೀಕರಿಸಲು ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ. ರಾಜ್ಯ ಸರಕಾರ ರಾಜ್ಯದ 35 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರಸ್ತುತ ವರ್ಷದಲ್ಲಿ ಪ್ರೌಢಶಾಲೆಯಾಗಿ ಉನ್ನತೀಕರಿಸಿದ್ದು, ಈ ಪಟ್ಟಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಶಾಲೆಯಾಗಿ ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿರುವುದು ವಿಶೇಷ.
ಶತಮಾನದ (ಸುಮಾರು 132 ವರ್ಷಗಳ) ಇತಿಹಾಸ ಹೊಂದಿ, ಸದ್ಯ 920 ವಿದ್ಯಾರ್ಥಿಗಳನ್ನು ಹೊಂದಿರುವ ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಳೀಯ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರೌಢಶಾಲೆಯಾಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಇದೇ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ, ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಧುಸೂಧನ್ ಐತಾಳ್ ಸಹಿತ ಎಸ್ ಡಿ ಎಂ ಸಿ ಸದಸ್ಯರುಗಳು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ವಿಧಾನ ಪರಿಷತ್ ಸದಸ್ಯರುಗಳಾದ ಡಾ ಮಂಜುನಾಥ ಭಂಡಾರಿ, ಐವನ್ ಡಿ ಸೋಜ, ಮಾಜಿ ಸಚಿವ ಬಿ ರಮಾನಾಥ ರೈ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಎಂ ಎಲ್ ಸಿ ಹರೀಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದರು.
ದೊಡ್ಡ ಸಂಖ್ಯೆಯಲ್ಲಿ ಪ್ರಾಥಮಿಕ ವಿದ್ಯಭ್ಯಾಸ ಮಾಡುತ್ತಿರುವ ಈ ಶಾಲಾ ಬಡ ವಿದ್ಯಾರ್ಥಿಗಳು 8ನೇ ತರಗತಿಯ ನಂತರದ ವಿದ್ಯಾಭ್ಯಾಸಕ್ಕೆ ದೂರದ ಪ್ರದೇಶಗಳಿಗೆ ಹೋಗುವುದು ಅನಾನುಕೂಲವಾಗಿ ವಿಧ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಸಾಧ್ಯತೆಯ ಬಗ್ಗೆ ಎಸ್ ಡಿ ಎಂ ಸಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಕ್ಷಣ ಪ್ರೇಮಿಗಳ ಮನವಿಗೆ ಸ್ಪಂದಿಸಿದ ನಾಯಕರುಗಳು ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿದ್ದರು. ಎಂ ಎಲ್ ಸಿ ಡಾ ಮಂಜುನಾಥ್ ಭಂಡಾರಿ ಅವರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳ ಹಿತದೃಷ್ಟಿಗೆ ಸ್ಪಂದಿಸಿದ್ದಾರೆ. ಇದೀಗ ಮನವಿ ಪುರಸ್ಕರಿಸಿದ ರಾಜ್ಯ ಸರಕಾರ ಈ ಶಾಲೆಯನ್ನು ಪ್ರೌಢಶಾಲೆಯಾಗಿ ಉನ್ನತೀಕರಿಸಿ ಆದೇಶಿಸಿದೆ.
ಬ ಮಕ್ಕಳ ಶಾಲಾ ವಿದ್ಯಾಭ್ಯಾಸದ ನಿಟ್ಟಿನಲ್ಲಿ ಕಲ್ಲಡ್ಕ ಸರಕಾರಿ ಶಾಲೆಯನ್ನು ಉನ್ನತೀಖರಿಸಿ ಪ್ರೌಢಶಾಲೆಯಾಗಿ ಮಾಡಿದ ರಾಜ್ಯ ಮುಖ್ಯಮಂತ್ರಿ ಸಹಿತ ಸಹಕರಿಸಿದ ಎಲ್ಲ ನಾಯಕರಿಗೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಧುಸೂಧನ್ ಐತಾಳ್ ಹಾಗೂ ಸರ್ವ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.
0 comments:
Post a Comment