ಪುತ್ತೂರು, ಸೆಪ್ಟೆಂಬರ್ 14, 2025 (ಕರಾವಳಿ ಟೈಮ್ಸ್) : ತಾಲೂಕಿನ ಕಣಿಯಾರ್ ಬೈಲ್ ಕಾಲೊನಿ ನಿವಾಸಿಗಳು ತಮ್ಮ ಪ್ರದೇಶದ ರಸ್ತೆ, ಸೇತುವೆ ಮೊದಲಾದ ಮೂಲಭೂತ ಸಮಸ್ಯೆಗಳ ಬಗ್ಗೆ ಕಳೆದ 15 ವರ್ಷಗಳಿಂದ ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಶಾಸಕ ಅಶೋಕ್ ರೈ ಜೊತೆ ಅಲವತ್ತುಕೊಂಡಿದ್ದಾರೆ.
ಯಾರಿಗೆ ಮನವಿ ಮಾಡಿದರೂ ನಮಗೆ ಭರವಸೆ ಮಾತ್ರ ದೊರೆತಿದ್ದು, ನಮ್ಮ ಬೇಡಿಕೆ ಈಡೇರಲೇ ಇಲ್ಲ. ನಮ್ಮನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಸೇತುವೆ ಇಲ್ಲದೆ ಮಳೆಗಾಲದಲ್ಲಿ ಮಕ್ಕಳು ನೀರಿನಲ್ಲೇ ಶಾಲೆಗೆ ತೆರಳಬೇಕಾದ ಸನ್ನಿವೇಶದ ಬಗ್ಗೆ ಇಲ್ಲಿನ ನಿವಾಸಿಗಳು ಶಾಸಕರಿಗೆ ತಿಳಿಸಿದರು.
ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ ಮುಂದಿನ ಆರು ತಿಂಗಳೊಳಗೆ ನಿಮ್ಮ ಸೇತುವೆ, ರಸ್ತೆ ಮೊದಲಾದ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತೇನೆ. ಉಳಿದ ಬೇಡಿಕೆಗಳಿಗೂ ಹಂತ ಹಂತವಾಗಿ ಸ್ಪಂದಿಸುತ್ತೇನೆ. ಇದು ಕೇವಲ ಭರವಸೆ ಅಲ್ಲ. ನನ್ನ ಮನದಾಳದ ಮಾತಾಗಿದ್ದು, ಖಂಡಿತಾ ಮಾಡಿ ತೋರಿಸುತ್ತೇನೆ. ನನಗೆ ಆಶೀರ್ವಾದ ಮಾಡಿ ಎಂದರು.
0 comments:
Post a Comment