ಮಂಗಳೂರು, ಸೆಪ್ಟೆಂಬರ್ 27, 2025 (ಕರಾವಳಿ ಟೈಮ್ಸ್) : ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಎಚ್.ಸಿ ಪುಟ್ಟರಾಮ್ ಸಿ ಎಚ್ ಮತ್ತು ಪಿ.ಸಿ ಮಲ್ಲಿಕ್ ಜಾನ್ ಅವರು ಸೆ 26 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಂಜೆ 7.45 ಗಂಟೆಗೆ ಕೇರಳ ಮೂಲದ ಅದೈತ್ ಶ್ರೀಕಾಂತ್, ಮುಹಮ್ಮದ್ ಅಫ್ಸಿನ್, ಮೊಹಮ್ಮದ್ ಸ್ವಾನಿದ್ ಹಾಗೂ ಇತರರು ಎಲ್ಲಿಂದಲೋ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ವಾಣಿಜ್ಯ ಪ್ರಮಾಣದಲ್ಲಿ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಮಂಗಳೂರು ನಗರ ಅತ್ತಾವರ ಕಾಪ್ರಿಗುಡ್ಡೆ ಮಸೀದಿ ಬಳಿಯಿರುವ ಕಿಂಗ್ಸ್ ಕೋರ್ಟ್ ಅಪಾರ್ಟಮೆಂಟಿನ ಪ್ಲಾಟ್ ನಂಬ್ರ ಜಿ1ರಲ್ಲಿ ತಮ್ಮ ವಶದಲ್ಲಿಟ್ಟುಕೊಂಡಿರುತ್ತಾರೆ ಎಂಬ ಖಚಿತ ಮಾಹಿತಿ ಬಂದಿರುವುದರಿಂದ ಈ ಬಗ್ಗೆ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿಯಂತೆ ಠಾಣಾ ಅಪರಾಧ ಕ್ರಮಾಂಕ 206/2025, ಕಲಂ 8(ಸಿ) 22(ಬಿ)(2)ಸಿ ಎನ್.ಡಿ.ಪಿ.ಎಸ್. ಆಕ್ಟ್-1985 ರಂತೆ ಪ್ರಕರಣ ದಾಖಲಾಗಿರುತ್ತದೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್ಸೈ ಶೀತಲ್ ಅಲಗೂರು ಅವರು ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ನಡೆಸಿ ಮಂಗಳೂರು ನಗರದ ಅತ್ತಾವರ ಕಾಫ್ರಿಗುಡ್ಡೆ ಕಿಂಗ್ಸ್ ಕೋರ್ಟ್ ಅಪಾರ್ಟಮೆಂಟ್ ಪ್ಲಾಟ್ ನಂಬರ್ ಜಿ1 ಕೋಣೆಗೆ ದಾಳಿ ನಡೆಸಿ ಆರೋಪಿಗಳಾದ ಅದ್ವೈತ್ ಶ್ರೀಕಾಂತ್, ಮುಹಮ್ಮದ್ ಅಪ್ಸಿನ್, ಮುಹಮ್ಮದ್ ಸ್ವಾನೀದ್, ನಿಬಿನ್ ಟಿ ಕುರಿಯನ್, ಮುಹಮ್ಮದ್ ಕೆ.ಕೆ, ಮುಹಮ್ಮದ್ ಹನಾನ್, ಮುಹಮ್ಮದ್ ಶಾಮಿಲ್, ಅರುಣ್ ತೋಮಸ್, ಮುಹಮ್ಮದ್ ನಿಹಾಲ್ ಸಿ, ಮೊಹಮ್ಮದ್ ಜಾಸೀಲ್ ವಿ, ಸಿದಾನ್ ಪಿ ಎಂಬರನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿಗಳೆಲ್ಲರೂ ಮಂಗಳೂರಿನ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಬಿ.ಎ. ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿರುತ್ತಾರೆ. ಇವರುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳು ಮಾರಾಟ ಮಾಡುವ ಸಲುವಾಗಿ ಓರಿಸ್ಸಾ ಮೂಲಕ ಖರೀದಿಸಿ ತಂದಿದ್ದ ಸುಮಾರು 1,45,280/- ರೂಪಾಯಿ ಮೌಲ್ಯದ 12 ಕೆ.ಜಿ 264 ಗ್ರಾಂ ತೂಕದ ನಿಷೇದಿತ ಮಾದಕ ವಸ್ತು ಗಾಂಜಾ ಇರುವ 7 ಪ್ಯಾಕೇಟುಗಳನ್ನು, ಸುಮಾರು 2 ಸಾವಿರ ರೂಪಾಯಿ ಮೌಲ್ಯದ 2 ಡಿಜಿಟಲ್ ತೂಕ ಮಾಪನಗಳು ಮತ್ತು ಸುಮಾರು 1.05 ಲಕ್ಷ ರೂಪಾಯಿ ಮೌಲ್ಯದ 11 ಮೊಬೈಲ್ ಪೊನ್ ಗಳ ಸಹಿತ ಒಟ್ಟು 3,52,280/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಸೆಂಟ್ರಲ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ಥೋರಟ್, ಅವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಗುರುರಾಜ್ ಹಾಗೂ ಪಿಎಸ್ಸೈಗಳಾದ ಶೀತಲ್ ಅಲಗೂರು ಮತ್ತು ಮಾರುತಿ ಪಿ ಅವರು ಆರೋಪಿಗಳನ್ನು ಪತ್ತೆ ಮಾಡಿ ಸೊತ್ತುಗಳನ್ನು ಸ್ವಾದೀನಪಡಿಸಿಕೊಂಡಿರುತ್ತಾರೆ. ಆರೋಪಿಗಳ ಹಾಗೂ ಸೊತ್ತು ಪತ್ತೆಗೆ ದಕ್ಷಿಣ ಪೊಲೀಸ್ ಠಾಣಾ ಸಿಬ್ಬಂದಿಗಳು ಸಹಕರಿಸಿರುತ್ತಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
0 comments:
Post a Comment