ಸರಕಾರಿ ಜಾಗ ಹುಡುಕಿ ದಾಖಲೆ ಒಪ್ಪಿಸಿದರೆ ಬಿಲ್ಲವ ಸಮಾಜಕ್ಕೆ ಭೂಮಿ ಮಂಜೂರಾತಿಗೆ ಪ್ರಯತ್ನ : ಪುತ್ತೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಪುತ್ತೂರು, ಸೆಪ್ಟೆಂಬರ್ 07, 2025 (ಕರಾವಳಿ ಟೈಮ್ಸ್) : ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಶಿಷ್ಯರಾಗಿದ್ದರು, ಅವರ ಸಿದ್ದಾಂತಕ್ಕೆ ಮಾರು ಹೋಗಿದ್ದ ಮಾಜಿ ಪ್ರಧಾನಿಗಳು, ನಾರಾಯಣ ಗುರುಗಳ ತತ್ವ ಸಿದ್ದಾಂತವನ್ನು ದೇಶದಲ್ಲಿ ಜಾರಿಗೆ ತಂದಿದ್ದರು. ಉಳುವವನೇ ಭೂಮಿಯ ಒಡೆಯ ಎಂಬ ಭೂ ಮಸೂದೆ ಕಾನೂನನ್ನು ಜಾರಿ ಮಾಡಲು ನಾರಾಯಣ ಗುರುಗಳೇ ಕಾರಣರಾಗಿದ್ದರು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು, ನಾರಾಯಣ ಗುರು ಸ್ವಾಮಿ ಮಂದಿರ ಇವುಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ಸಭಾಭವನದಲ್ಲಿ ನಡೆದ 171ನೇ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಅಸಮಾನತೆ, ಜಾತಿ ಪದ್ದತಿ ವಿಜೃಂಬಿಸುತ್ತಿದ್ದ ಕಾಲದಲ್ಲಿ ಸಮಾನತೆಯ ಸಿದ್ದಾಂತವನ್ನು ಜಗತ್ತಿಗೆ ಸಾರಿದವರು ನಾರಾಯಣ ಗುರುಗಳು. ಇವರ ತತ್ವ ಸಿದ್ದಾಂತವನ್ನು ಜಗತ್ತೇ ಒಪ್ಪಿಕೊಂಡಿತ್ತು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಪರಿಕಲ್ಪನೆಯೊಂದಿಗೆ ಸಮಾಜದಲ್ಲಿ ನೊಂದವರ ಧ್ವನಿಯಾಗಿ, ಓರ್ವ ಯೋಗಿಯಾಗಿ ಸಮಾಜದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ನಾರಾಯಣ ಗುರುಗಳ ತತ್ವ ಸಿದ್ದಾಂತಕ್ಕೆ ಮಾರುಹೋಗಿದ್ದರು. ಇದೇ ಕಾರಣಕ್ಕೆ ದೇಶದ ಜನತೆಗೆ ಭೂಮಿಯ ಸಮಾನ ಹಕ್ಕಿಗಾಗಿ ಉಳುವವನೇ ಒಡೆಯ ಎಂಬ ಕಾನೂನು ಜಾರಿಗೆ ತಂದು ಸಮಾನತೆಯನ್ನು ಸಾರಿದರು. ಆದರೆ ಈ ಕಾನೂನು ಜರಿಗೆ ತಂದ ಇಂದಿರಾ ಗಾಂಧಿಯವರನ್ನು ಜನ ಮರೆತಿದ್ದಾರೆ ಎಂದು ಹೇಳಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಶಿಕ್ಷಣವಂತನಾಗಬೇಕು, ಸಮಾಜದ ಮುಖ್ಯ ವಾಹಿನಿಯಲ್ಲಿ ಬರಬೇಕು ಎಂಬ ಉದ್ದೇಶದಿಂದ ದೇಶಾದ್ಯಂತ ಆಂದೋಲನ ಮಾದರಿಯಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಯೂ ಆಗಿದ್ದರು. ಅವರನ್ನು ನೆನೆಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಇಂದು ನಾವು ಕೃಷಿ ಮಾಡಿಕೊಂಡಿರುವ, ಅಥವಾ ಮನೆ ಕಟ್ಟಿಕೊಂಡಿರುವ ಸರಕಾರಿ ಭೂಮಿಯನ್ನು ಅಕ್ರಮ-ಸಕ್ರಮ ಅಥವಾ 94ಸಿ, 94ಸಿಸಿ ಅಡಿಯಲ್ಲಿ ನಾವು ಸಕ್ರಮ ಮಾಡಿಕೊಂಡಿದ್ದರೆ ಅದಕ್ಕೆ ನಾರಾಯಣ ಗುರುಗಳ ಸಿದ್ದಾಂತ ಕಾರಣವಾಗಿದೆ. ಅವರು ನಮ್ಮ ಜೊತೆ ಈಗ ಇಲ್ಲದೇ ಇರಬಹುದು. ಆದರೆ ಅವರ ತತ್ವ ಸಿದ್ದಾಂತಗಳು ಇಂದು ಜಗತ್ತಿಗೆ ನೀತಿ ಪಾಠವಾಗಿ ಪರಿಣಮಿಸಿದ್ದು ಭಾರತೀಯರಾದ ನಾವು ಹೆಮ್ಮಪಡೆಬೇಕಾದ ವಿಚಾರವಾಗಿದೆ ಎಂದ ಶಾಸಕ ರೈ ಸರಕಾರಿ ಜಾಗವನ್ನು ಹುಡುಕಿ ಅದರ ದಾಖಲೆಯನ್ನು ತಂದುಕೊಟ್ಟಲ್ಲಿ ಬಿಲ್ಲವ ಸಂಘಕ್ಕೆ ಭೂಮಿ ಮಂಜೂರು ಮಾಡಿಕೊಡುತ್ತೇನೆ. ಜಾಗ ಎಲ್ಲಿದೆ ಎಂಬುದನ್ನು ಸಂಘದವರೇ ಪತ್ತೆ ಮಾಡಿ ಅದರ ಎಲ್ಲಾ ದಾಖಲೆಗಳನ್ನು ನನ್ನಲ್ಲಿ ನೀಡಿದ್ದಲ್ಲಿ ನಾನು ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದು ಭೂಮಿ ಕೊಡಿಸುವ ಕೆಲಸವನ್ನು ಮಾಡುತ್ತೇನೆ. ಈಗಾಗಲೇ ಹಲವು ಸಂಘಗಳಿಗೆ ಭೂಮಿಯನ್ನು ಕೊಡಲಾಗಿದೆ ಎಂದು ಶಾಸಕರು ಹೇಳಿದರು.
0 comments:
Post a Comment